ಚಿಂತಾಮಣಿ(ಚಿಕ್ಕಬಳ್ಳಾಪುರ): ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದ ವ್ಯಕ್ತಿ ವೈದ್ಯರ ನಿರ್ಲಕ್ಷ್ಯದಿಂದ ಮೂರು ಗಂಟೆಗಳ ಕಾಲ ಆಸ್ಪತ್ರೆಯ ಆವರಣದಲ್ಲಿ ಒಮ್ನಿಯಲ್ಲೇ ಕುಳಿತು ನರಳಾಡಿರುವ ಆರೋಪ ಪ್ರಕರಣ ಚಿಂತಾಮಣಿ ನಗರ ಸಾರ್ವಜನಿಕ ಆಸ್ಪತ್ರೆ ಬಳಿ ನಡೆದಿದೆ.
ಚಿಕಿತ್ಸೆಗೆ ಬಂದ ವ್ಯಕ್ತಿ ತಾಲೂಕಿನ ಸಿದ್ದಿಮಠ ಗ್ರಾಮದ ಅಹಮ್ಮದ್ ಪಾಷಾ ಎಂಬುವರಾಗಿದ್ದು, ಇವರು ಮಧ್ಯಾಹ್ನ ಎರಡು ಗಂಟೆ ಸಮಯಕ್ಕೆ ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದಿದ್ದಾರೆ. ಆದರೆ, ವೈದ್ಯರು ಹೊಟ್ಟೆನೋವಿಗೆ ಚಿಕಿತ್ಸೆ ನೀಡದೆ ಕೋವಿಡ್ ಟೆಸ್ಟ್ ಮಾಡಿಸಿ ಎಂದು ಹೇಳಿದ್ದರಿಂದ ಚಿಕಿತ್ಸೆ ದೊರೆಯದೇ ಸುಮಾರು ಮೂರು ಗಂಟೆಗಳ ಕಾಲ ಕಾದು ಕುಳಿತ ಪ್ರಸಂಗ ನಡೆದಿದೆ.
ವೈದ್ಯರ ನಡೆಗೆ ಬೇಸತ್ತ ರೋಗಿಯ ಸಂಬಂಧಿ ಮಾಧ್ಯಮದವರ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಸ್ಪಂದಿಸಿದ ಪತ್ರಕರ್ತರು ಸ್ಥಳಕ್ಕೆ ಭೇಟಿ ನೀಡಿ ವೈದ್ಯರನ್ನು ಪ್ರಶ್ನಿಸಿದಾಗ ರೋಗಿಗೆ ಚಿಕಿತ್ಸೆ ನೀಡಿದ್ದಾರೆ.
ಆಸ್ಪತ್ರೆಗೆ ಬರುವ ಎಲ್ಲ ರೋಗಿಗಳಿಗೂ ಮೊದಲು ಕೋವಿಡ್ ಟೆಸ್ಟ್ ಮಾಡಿಸಿ ಎಂದು ಚಿಕಿತ್ಸೆ ವಿಳಂಬ ಮಾಡುವುದು ಎಷ್ಟು ಸರಿ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.