ಚಿಕ್ಕಬಳ್ಳಾಪುರ : ಸರ್ಕಾರಿ ಶಾಲೆಯನ್ನು ಜಿಲ್ಲೆಯಲ್ಲಿಯೇ ಮಾದರಿ ಶಾಲೆಯನ್ನಾಗಿ ಮಾಡಿದ ಶಿಕ್ಷಕನಿಗೆ ರಾಜ್ಯಪ್ರಶಸ್ತಿ ಅರಸಿ ಬಂದಿದೆ. ಪಾಳು ಬಿದ್ದಿದ್ದ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಿದ ಶಿಕ್ಷಕರ ಹೆಸರು ಚಂದ್ರಶೇಖರ್. ಇವರ ಪರಿಶ್ರಮ ಗುರುತಿಸಿ ರಾಜ್ಯಸರ್ಕಾರವು ರಾಜ್ಯಮಟ್ಟದ ಪ್ರಾಥಮಿಕ ವಿಭಾಗದ ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ ಘೋಷಣೆ ಮಾಡಿದೆ.
2007ರಲ್ಲಿ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಸರ್ಕಾರಿ ಶಾಲೆಯಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದ ಚಂದ್ರಶೇಖರ್, 4 ವರ್ಷಗಳ ಕಾಲ ಅಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ ಚಿಕ್ಕಬಳ್ಳಾಪುರ ತಾಲೂಕಿನ ರಾಗಿಮಾಕಲಹಳ್ಳಿಗೆ ವರ್ಗಾವಣೆಯಾದ ಇವರು, ಈ ಶಾಲೆಯಲ್ಲಿ ಸುಮಾರು 8 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಇಲ್ಲಿಗೆ ಬಂದಾಗ ಸರ್ಕಾರಿ ಶಾಲೆಯಲ್ಲಿ ಮೂಲ ಸೌಲಭ್ಯಗಳ ಕೊರತೆಯಿತ್ತು. ಅಂದಿನಿಂದ ಇಂದಿನವರೆಗೂ ದಾನಿಗಳ ಸಹಾಯದಿಂದ ಹಾಗೂ ಎಸ್ ಡಿಎಂಸಿ ಹಾಗೂ ಗ್ರಾಪಂ ನೆರವಿನಿಂದ ಶಾಲೆಯನ್ನು ಹಂತಹಂತವಾಗಿ ಅಭಿವೃಧ್ಧಿಪಡಿಸಲು ಇವರು ಶ್ರಮಿಸಿದರು. ಜೊತೆಗೆ ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವಲ್ಲಿಯೂ ಶ್ರಮಿಸಿದರು.
ಈ ಸರ್ಕಾರಿ ಶಾಲೆಯ ಬೆಳವಣಿಗೆಯನ್ನು ಕಂಡು ರಾಜ್ಯ ಸರ್ಕಾರವು ಚಂದ್ರಶೇಖರ್ ಅವರಿಗೆ ರಾಜ್ಯಪ್ರಶಸ್ತಿ ಘೋಷಿಸಿದ್ದು, ಸೆ.5ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಇವರು ರಾಜ್ಯಪ್ರಶಸ್ತಿ ಪಡೆಯಲಿದ್ದಾರೆ. ಇನ್ನು ಪ್ರಶಸ್ತಿ ಬಂದಿರುವುದು ಸಾಕಷ್ಟು ಸಂತಸವನ್ನು ತಂದಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಚಂದ್ರಶೇಖರ್ ಹೇಳಿದ್ದಾರೆ.
ಇದನ್ನೂ ಓದಿ : ಕೊಪ್ಪಳದ ಗಣೇಶೋತ್ಸವದಲ್ಲಿ ಅಪ್ಪುವಿನ ಜೀವನ ಚರಿತ್ರೆ ಪ್ರದರ್ಶನ