ಚಾಮರಾಜನಗರ : ಕಾಡಾನೆ ಮುಂದೆ ನಿಂತ ಮಹಿಳೆಯೊಬ್ಬರು ಹುಚ್ಚಾಟ ನಡೆಸಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ. ಸರಿಯಾಗಿ ಗಸ್ತು, ಮೇಲ್ವಿಚಾರಣೆ ನಡೆಸದ ಅಧಿಕಾರಿಗಳ ವಿರುದ್ಧ ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂರಕ್ಷಿತ ಪ್ರದೇಶದ ರಸ್ತೆಯಲ್ಲಿ ಕಾರು ನಿಲ್ಲಿಸಿ ಆನೆ ಮುಂದೆ ಮಹಿಳೆ ಹುಚ್ಚಾಟ ನಡೆಸಿದ್ದಾರೆ. 'ನೀವು ನೋಡ್ತಾ ಇರೋದು ಗಜರಾಜ. ಅವರು ನಮ್ಮನ್ನೇ ನೋಡ್ತಾ ಇದ್ದಾರೆ.
ಬಹಳ ಖುಷಿಯಾಗುತ್ತಿದೆ. ನೋಡಿ, ಗಜರಾಜ ಎಷ್ಟು ಚೆನ್ನಾಗಿದ್ದಾರೆ'..! ಎಂದು ಆನೆ ಕುರಿತು ಬಹುವಚನದಲ್ಲಿ ಮಾತನಾಡುತ್ತಾ ಅಣತಿ ದೂರದಲ್ಲೇ ನಿಂತು ಹುಚ್ಚಾಟ ನಡೆಸಿದ್ದಾರೆ. ಇದನ್ನು ಸಹಪ್ರಯಾಣಿಕನೋರ್ವ ವಿಡಿಯೋ ಮಾಡಿದ್ದಾನೆ.
ಸದ್ಯ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಹೀಗಾಗಿ, ಅರಣ್ಯಾಧಿಕಾರಿಗಳ ವಿರುದ್ಧ ಪರಿಸರವಾದಿಗಳು ಕೆಂಡಕಾರಿದ್ದಾರೆ. ಕಾಡಾನೆ ಮುಂದೆ ಹುಚ್ಚಾಟ ನಡೆಸುವ ಜೊತೆಗೆ ಪ್ರಾಣಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದು, ಆಹಾರ ತಿನ್ನಿಸುವುದು ನಡೆಯುತ್ತಿದೆ.
ಹೀಗಿದ್ದರೂ ಬಂಡೀಪುರ ಸಿಎಫ್ಒ ನಟೇಶ್ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಪರಿಸರ ಹೋರಾಟಗಾರ ಜೋಸೆಫ್ ಹೂವರ್ ವೈರಲ್ ವಿಡಿಯೋ ಪೋಸ್ಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.
ಓದಿ: ಮೈಸೂರು ವಿವಿಯಲ್ಲಿ 382 ಹುದ್ದೆಗಳು ಖಾಲಿ ಇವೆ : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್