ಚಾಮರಾಜನಗರ: ಕೇರಳದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು ಹಾಗೂ ಮೂರನೇ ಅಲೆಯನ್ನು ತಪ್ಪಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಪ್ರವಾಸಿಗರು, ಭಕ್ತರಿಗೆ ವಾರಾಂತ್ಯ ಕರ್ಫ್ಯೂವನ್ನು ಜಾರಿ ಮಾಡುವ ಮೂಲಕ ಶಾಕ್ ಕೊಟ್ಟಿದೆ.
ಮಲೆಮಹದೇಶ್ವರ ದೇವಾಲಯ ಸೇರಿದಂತೆ ಜಿಲ್ಲೆಯ ಎಲ್ಲಾ ದೇವಾಲಯಗಳು, ಬಂಡೀಪುರ ಸಫಾರಿ, ಭರಚುಕ್ಕಿ, ಹೊಗೇನಕಲ್ ಜಲಪಾತ, ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರು, ಭಕ್ತರು ಪ್ರವೇಶವನ್ನು ಶನಿವಾರ, ಭಾನುವಾರ ನಿರ್ಬಂಧಗೊಳಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಇಂದು ಆದೇಶ ಹೊರಡಿಸಿದ್ದಾರೆ.
ಸಫಾರಿಗೆ ತೆರಳಲು, ರೆಸಾರ್ಟ್, ಹೋಂ ಸ್ಟೇಗಳಲ್ಲಿ ಪ್ರವಾಸಿಗರು ತಂಗಲು 72 ಗಂಟೆ ಒಳಗಿನ RT-PCR ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ. ಕೇರಳದಿಂದ ಬರುವ ಜನರು 2 ಡೋಸ್ ಲಸಿಕೆ ಪಡೆದಿರಬೇಕು. ಇದರ ಜೊತೆಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಲಗ್ಗೆ ಇಟ್ಟಿದ್ದ ಪ್ರವಾಸಿಗರು:
ವೀಕೆಂಡ್ ರಿಲ್ಯಾಕ್ಸ್ಗಾಗಿ ಶನಿವಾರ, ಭಾನುವಾರ ಸಾವಿರಾರು ಪ್ರವಾಸಿಗರು ಗುಂಡ್ಲುಪೇಟೆ ತಾಲೂಕಿನ ಬಂಡೀಪುರ, ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಲಗ್ಗೆ ಇಟ್ಟಿದ್ದರು. ಬಂಡೀಪುರ ಸಫಾರಿಯಲ್ಲಿ ಎರಡು ದಿನಕ್ಕೆ 6 ಲಕ್ಷಕ್ಕೂ ಹೆಚ್ಚು ಆದಾಯವೂ ಬಂದಿತ್ತು. ಮೋಜಿನಲ್ಲಿ ಪ್ರವಾಸಿಗರು ಮೈ ಮರೆಯುತ್ತಿರುವುದರಿಂದ ಜಿಲ್ಲಾಡಳಿತ ಈ ಕಟ್ಟೆಚ್ಚರ ವಹಿಸಿದೆ.
ಓದಿ: ಸಂಪುಟ ಸೂತ್ರ ಇಂದು ರಾತ್ರಿ ಅಂತಿಮ : ಬುಧವಾರವೇ ಸಚಿವರ ಪ್ರಮಾಣ ವಚನ?