ಚಾಮರಾಜನಗರ: ವಕ್ಫ್ ಬೋರ್ಡ್ ಸಾವಿರಾರು ಎಕರೆ ಆಸ್ತಿ ಕಬಳಿಕೆ ಆಗಿರುವುದು ನಿಜ. ಈ ಕುರಿತ ವರದಿ ಮುಂದಿನ ಸದನದಲ್ಲಿ ಮಂಡನೆಯಾಗಿ ಚರ್ಚೆಗೆ ಬರಲಿದೆ ಎಂದು ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ತಿಳಿಸಿದರು.
ಕೋವಿಡ್-19 ಭೀತಿ ಹಿನ್ನೆಲೆಯಲ್ಲಿ ಮಸೀದಿಗಳಲ್ಲಿ ಕೈಗೊಳ್ಳುತ್ತಿರುವ ಮುಂಜಾಗ್ರತೆ ಮತ್ತು ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡುತ್ತಿರುವುದನ್ನು ಪರಿಶೀಲಿಸಲು ನಗರದ ವಿವಿಧ ಮಸೀದಿಗಳಿಗೆ ಭೇಟಿಯಿತ್ತು, ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಸುಮಾರು ವರ್ಷಗಳಿಂದ ವಕ್ಫ್ ಆಸ್ತಿ ಕಳ್ಳ ದಾಖಲೆ ಮೂಲಕ ಒತ್ತುವರಿಯಾಗಿದೆ. ವರದಿ ತಯಾರಾಗಿದ್ದು ಕೊರೊನಾದಿಂದಾಗಿ ಮಂಡಿಸಲಾಗಲಿಲ್ಲ. ಬರುವ ಸದನದಲ್ಲಿ ವರದಿ ಮಂಡಿಸಲಿದ್ದು, ಚರ್ಚೆ ಬಳಿಕ ಬಹಳಷ್ಟು ಆಸ್ತಿಗಳು ವಕ್ಫ್ ಗೆ ಬರಲಿದೆ ಎಂದರು.
ಆಸ್ತಿ ವಕ್ಫ್ ಗೆ ಬಂದ ನಂತರ ಅದರ ಲಾಭದಿಂದ ಸಮಾಜದ ಪ್ರಗತಿಗೆ ಮತ್ತಷ್ಟು ಅನುದಾನ ಬರಲಿದೆ. ಸರ್ಕಾರ ಈ ಕುರಿತು ಕ್ರಮ ಕೈಗೊಳ್ಳಲಿದ್ದು, ಸಾವಿರಾರು ಎಕರೆ ಆಸ್ತಿ ಬೋರ್ಡ್ ಗೆ ಮರಳುವ ವಿಶ್ವಾಸವಿದೆ ಎಂದು ಹೇಳಿದರು.
ಮಸೀದಿ, ಮಂದಿರಗಳಲ್ಲಿ ಸಾಮಾಜಿಕ ಅಂತರವಿಟ್ಟುಕೊಂಡು ಮಾಸ್ಕ್ ಧರಿಸಿ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಭಿಕ್ಷುಕರು ಮಂದಿರ, ಮಸೀದಿ ಬಳಿ ಬಂದರೆ ಸಂಬಂಧಪಟ್ಟ ಪೊಲೀಸ್, ನಗರಸಭೆ ಅವರ ಗಮನಕ್ಕೆ ತರಬೇಕೆಂದು ಸೂಚನೆಯನ್ನೂ ಕೊಡಲಾಗಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ, ನಗರದ ಮಸ್ಜಿದ್ ಎ ಅಜಾಮ್ ನಲ್ಲಿ ಮುಸ್ಲಿಂ ವ್ಯಕ್ತಿಯೋರ್ವ ಶಾದಿ ಭಾಗ್ಯದಿಂದ ಬಡವರಿಗೆ ಅನೂಕೂಲವಾಗಿತ್ತು. ಈಗ ಸಹಾಯ ಧನ ಬರುತ್ತಿಲ್ಲ ಈ ಕುರಿತು ಸರ್ಕಾರದ ಗಮನ ಸೆಳೆಯಬೇಕೆಂದು ಮನವಿ ಮಾಡಿದರು.