ಚಾಮರಾಜನಗರ: ಡಿಸೆಂಬರ್ನಲ್ಲಿ ರಾಜ್ಯ ಸರ್ಕಾರ ದಿವಾಳಿ ಆಗಲಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಭವಿಷ್ಯ ನುಡಿದಿದ್ದಾರೆ. ಚಾಮರಾಜನಗರದಲ್ಲಿ ಇಂದು ಬರ ಅಧ್ಯಯನ ನಡೆಸಿ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಡಿಸೆಂಬರ್ ವೇಳೆಗೆ ರಾಜ್ಯ ಸರ್ಕಾರ ದಿವಾಳಿ ಆಗುವುದರಿಂದ ಸಿಎಂ ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ, ಮತ್ತೊಬ್ಬರು ಸಿಎಂ ಆಗುತ್ತೇನೆ ಎಂಬ ಕನಸಿನಲ್ಲಿದ್ದಾರೆ ಎಂದು ಲೇವಡಿ ಮಾಡಿದರು.
ಹೈಬಿಪಿ, ಹೈ ಶುಗರ್ನಿಂದಾಗಿ ಜಾಮೀನು ಪಡೆದು ಡಿ ಕೆ ಶಿವಕುಮಾರ್ ಹೊರಗಿದ್ದಾರೆ. ಆರೋಗ್ಯ ಸರಿಹೋದ ಕೂಡಲೇ ಮತ್ತೆ ಜೈಲಿಗೆ ಸೇರುತ್ತಾರೆ, ಆ ನಿಟ್ಟಿನಲ್ಲಿ ವಕೀಲರ ತಂಡ ದೆಹಲಿಗೆ ಹೋಗಿದೆ. ವಕೀಲರ ತಂಡ ಯಾವ ಫ್ಲೈಟ್ನಲ್ಲಿ ಹೋಗಿದ್ದಾರೆ ಎಂಬುದನ್ನು ಸಿಎಂ ಹೇಳಬೇಕು ಎಂದು ಡಿಕೆಶಿ ವಿರುದ್ಧ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ಇದೇ ವೇಳೆ ರಾಜ್ಯ ಸರ್ಕಾರ ಈವರೆಗೆ ಬರದ ಬಗ್ಗೆ ಸರಿಯಾಗಿ ಮಾಹಿತಿ ಸಂಗ್ರಹಿಸಿಲ್ಲ, ಒಂದೊಂದು ಬಾರಿ ಒಂದೊಂದು ವರದಿ ಕೊಡುತ್ತಿದ್ದಾರೆ. ರಾಜ್ಯಕ್ಕೆ ಬರಗಾಲ ಸಿಎಂ ಸಿದ್ದರಾಮಯ್ಯ ಅವರ ಕೊಡುಗೆ, ಸಿದ್ದರಾಮಯ್ಯ ಅವರ ಕಾಲ್ಗುಣದಿಂದ ರಾಜ್ಯಕ್ಕೆ ಬರ ಬಂದಿದೆ ಎಂದು ಟೀಕಿಸಿದರು.
ನಾವು ಇಂದು ಚಾಮರಾಜನಗರ ಜಿಲ್ಲೆಯಲ್ಲಿ ಬರ ಅಧ್ಯಯನ ಆರಂಭಿಸಿದ್ದೇವೆ, ನಾವು ಬಂದ ಮೇಲೆ ನಮ್ಮ ಕಾಲ್ಗುಣದಿಂದ ಈಗ ಮಳೆ ಬಂದಿದೆ, ನಾಳೆ ಮೈಸೂರಿನಲ್ಲಿ ಅಧ್ಯಯನ ಮಾಡುತ್ತೇವೆ, ಈಗಾಗಲೇ ಬೆಳೆ ನಷ್ಟ ಅನುಭವಿಸಿರುವ ರೈತರ ಹೊಲಗಳಿಗೆ ಭೇಟಿ ನೀಡಿದ್ದೇವೆ, ಸಾಕಷ್ಟು ಕಡೆ ಬೆಳೆ ನಷ್ಟ ಆಗಿದೆ, ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಎಂದರು. ಬರ ಪರಿಸ್ಥಿತಿಯಲ್ಲಿ ನೊಂದ ರೈತರ ನೆರವಿಗೆ ಸರ್ಕಾರ ಮುಂದಾಗಿಲ್ಲ. ಎಸ್ಸಿಪಿ/ಟಿಎಸ್ಪಿ ಸೇರಿದಂತೆ ಎಲ್ಲಾ ಹಣವನ್ನು ಗ್ಯಾರೆಂಟಿ ಯೋಜನೆಗೆ ಬಳಸಿಕೊಂಡಿದ್ದಾರೆ ಎಂದು ಯತ್ನಾಳ್ ಆರೋಪಿಸಿದರು.
ಸಾಣೆಹಳ್ಳಿಶ್ರೀ ವಿರುದ್ಧ ಕಿಡಿ: ಗಣಪತಿ ಪೂಜೆ ವಿಚಾರದಲ್ಲಿ ಪಂಡಿತಾರಾಧ್ಯ ಶ್ರೀಗಳ ಹೇಳಿಕೆಗೆ ಯತ್ನಾಳ್ ಪ್ರತಿಕ್ರಿಯಿಸಿ,
ಅವರು ಕಮ್ಯುನಿಸ್ಟ್ ಅಥವಾ ನಕ್ಸಲೈಟ್ ಆಗಬೇಕಿತ್ತು, ಪ್ರಶಸ್ತಿಗಾಗಿ ಕೆಲವು ಮಠಾಧೀಶರು ಹಿಂದು ವಿರೋಧಿ ಹೇಳಿಕೆ ಕೊಡುತ್ತಾರೆ. ಕೋಟಿ ಕೋಟಿ ಅನುದಾನಕ್ಕಾಗಿ ಈ ರೀತಿ ಮಾತನಾಡುತ್ತಾರೆ ಎಂದು ಯತ್ನಾಳ್ ಹರಿಹಾಯ್ದರು.
25 ಜನ ಸಂಸದರು ಕೇಂದ್ರದಿಂದ ಬರ ಪರಿಹಾರ ಕೊಡಿಸಲಿ ಎಂಬ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬರ ಪರಿಸ್ಥಿತಿ ವಿಚಾರವಾಗಿ ಅವರು ಸಭೆ ಕರೆಯಲಿಲ್ಲ, ಸಂಸದರ ಸಭೆ ಕರೆದು ಬರದ ಬಗ್ಗೆ ಚರ್ಚೆ ನಡೆಸಿಲ್ಲ, ಸಂಸದರ ಬಗ್ಗೆ ಮಾತನಾಡುವ ನೈತಿಕತೆ ಸಿಎಂ ಸಿದ್ದರಾಮಯ್ಯಗೆ ಇಲ್ಲ ಎಂದು ಆಕ್ರೋಶ ಹೊರಹಾಕಿದರು.
ಶೆಟ್ಟರ್ ವಿರುದ್ಧ ವಾಗ್ದಾಳಿ: ಅಪರೇಷನ್ ಹಸ್ತ ಸಂಬಂಧ ಮಾತನಾಡಿ, ಜಗದೀಶ್ ಶೆಟ್ಟರ್ ಬಿಜೆಪಿ ಮಾಜಿ ಶಾಸಕರನ್ನು ಸೆಳೆಯುವ ಕೆಲಸ ಬಿಡಬೇಕು. ಗ್ರಾಪಂ ಅಧ್ಯಕ್ಷರಾಗಲು ಯೋಗ್ಯವಿಲ್ಲದಿದ್ದರೂ ಬಿಜೆಪಿ ಅವರನ್ನು ಸಿಎಂ ಮಾಡಿತ್ತು, ಮಂತ್ರಿ ಮಾಡಿತ್ತು, ಸ್ಪೀಕರ್, ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಿತ್ತು. ಈಗ ಕಾಂಗ್ರೆಸ್ಗೆ ಹೋಗಿ ಬಿಜೆಪಿ ಬಗ್ಗೆ ಮಾತನಾಡುತ್ತಿದ್ದಾರೆ. ಕಿರಾಣಿ ಅಂಗಡಿ ತೆರೆದು ಶಾಸಕರನ್ನು ವ್ಯಾಪಾರ ಮಾಡುವ ಕೆಲಸಕ್ಕೆ ಇಳಿದಿದ್ದಾರೆ ಎಂದು ಯತ್ನಾಳ್ ವಾಗ್ದಾಳಿ ನಡೆಸಿದರು.
ಬಿಜೆಪಿಯಲ್ಲಿ ವಿ.ಸೋಮಣ್ಣ ಅವರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಸೋಮಣ್ಣ ಅವರನ್ನು ಬಿಜೆಪಿ ಕಡೆಗಣಿಸಿಲ್ಲ. ಅವರಿಗೆ ಮುಂದೆ ಪಕ್ಷದಲ್ಲಿ ಒಳ್ಳೆಯ ಗೌರವಯುತ ಸ್ಥಾನ ಕಾದಿದೆ. ಸೋಮಣ್ಣ ಕಾಂಗ್ರೆಸ್ಗೆ ಹೋದ್ರೆ ಮಣ್ಣು ತಿನ್ನಬೇಕಷ್ಟೇ, ಕಾಂಗ್ರೆಸ್ನವರೇ 136 ಜನ ಇದ್ದಾರೆ. ಅವರಿಗೇ ಸರಿಯಾದ ಸ್ಥಾನ ಸಿಕ್ಕಿಲ್ಲ, ಸೋಮಣ್ಣ ಹೋದರೆ ಏನು ಸಿಗುತ್ತೆ. ಈಗ ನಮಗೆ ಲೋಕಸಭೆ ಚುನಾವಣೆ ಮಾತ್ರ ಬೇಕು. ಮೋದಿ ಮತ್ತೊಮ್ಮೆ ಪಿಎಂ ಆಗಲು ಹಗಲು ರಾತ್ರಿ ದುಡಿಯಬೇಕು. ಭಾರತವು ಭಾರತವಾಗಿ ಉಳಿಯಬೇಕು. ಅದಕ್ಕಾಗಿ 2024ಕ್ಕೆ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗಬೇಕು ಎಂದರು.
ಎಲ್ಲಾ ಅಕ್ರಮದ ಕಿಂಗ್ ಪಿನ್ಗಳೆಲ್ಲರೂ ಕಾಂಗ್ರೆಸ್ನವರು. ಪಿಎಸ್ಐ ಹಗರಣ ವಿಚಾರದಲ್ಲಿ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ಮಾತನಾಡುತ್ತಿದ್ದರು. ಪರೀಕ್ಷಾ ಹಗರಣದಲ್ಲಿ ಪ್ರಿಯಾಂಕ್ ಖರ್ಗೆ ಕೈವಾಡ ಇದೆ ಎನಿಸುತ್ತದೆ. ಈಗ ನಿಮ್ಮದೇ ಸರ್ಕಾರ ಇದೆ, ಸಿಬಿಐ ತನಿಖೆ ಮಾಡಿ. ನೀವು ಐದು ತಿಂಗಳಾದರೂ ಯಾವುದೇ ತನಿಖೆ ನಡೆಸಿಲ್ಲ. ನಿಮಗೆ ಧಮ್, ತಾಕತ್ ಇದ್ರೆ ತನಿಖೆ ನಡೆಸಿ ಎಂದು ಸವಾಲು ಹಾಕಿದರು.
ಇದನ್ನೂ ಓದಿ: ಇನ್ಮುಂದೆ ರಾಜ್ಯದೆಲ್ಲೆಡೆ ಕೃಷಿ ಪಂಪ್ಸೆಟ್ಗಳಿಗೆ ಏಳು ತಾಸು ನಿರಂತರ ವಿದ್ಯುತ್ ಪೂರೈಕೆ: ಸಿಎಂ ಘೋಷಣೆ