ಚಾಮರಾಜನಗರ: ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಜ್ಯದಲ್ಲಿ ಆರಂಭಗೊಂಡ ಮೊದಲ ದಿನದ ಭಾರತ್ ಜೋಡೋ ಯಾತ್ರೆ ಭರ್ಜರಿಯಾಗಿ ನಡೆದಿದ್ದು, ಮೈಸೂರು ಭಾಗದಲ್ಲಿ ಕೈ ಪಾಳೆಯಕ್ಕೆ ಹೊಸ ಹುರುಪು ಮೂಡಿಸಿದೆ. ತಮಿಳುನಾಡಿನ ಗೂಡಲೂರಿನ ಮೂಲಕ ರಾಜ್ಯಕ್ಕೆ ಆಗಮಿಸಿದ ರಾಹುಲ್ ಗಾಂಧಿಗೆ ಸಿದ್ದರಾಮಯ್ಯ ಮತ್ತು ಇನ್ನಿತರ ಮುಖಂಡರು ಸ್ವಾಗತ ಕೋರಿ, ಖಾಸಗಿ ರೆಸಾರ್ಟ್ಗೆ ಕರೆದೊಯ್ದು ಕಾಫಿ-ತಿಂಡಿ ಆತಿಥ್ಯ ಕೊಟ್ಟರು.
ನಗಾರಿ ಬಾರಿಸಿ ಯಾತ್ರೆಗೆ ಚಾಲನೆ ಕೊಟ್ಟ ರಾಹುಲ್ ಗಾಂಧಿ ವೇದಿಕೆಯಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರ ಒಗ್ಗಟ್ಟನ್ನು ಪ್ರದರ್ಶಿಸಿ ನಡಿಗೆ ಆರಂಭಿಸಿದರು. ಗುಂಡ್ಲುಪೇಟೆ ಹೊರ ವಲಯದ ಕೆಬ್ಬೆಕಟ್ಟೆ ಶನೀಶ್ವರ ದೇವಾಲಯ ಬಳಿ ಸೋಲಿಗರು ಮತ್ತು ಆಮ್ಲಜನಕ ದುರಂತದ ಸಂತ್ರಸ್ತರೊಂದಿಗೆ ಸಂವಾದ ನಡೆಸಿ ಸಂಜೆ 4.30ರ ಸುಮಾರಿಗೆ ಮತ್ತೇ ನಡಿಗೆ ಆರಂಭಿಸಿ ಬೇಗೂರಿನಲ್ಲಿ ಕಂಟೇನರ್ ಹೌಸ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ನಾಳೆ ಬೆಳಗ್ಗೆ 7 ಗಂಟೆಗೆ ಎರಡನೇ ದಿನದ ಪಾದಯಾತ್ರೆ ಬೇಗೂರಿನಲ್ಲಿ ಆರಂಭವಾಗಲಿದ್ದು, 8.30 ರ ಹೊತ್ತಿಗೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿಗೆ ತೆರಳಲಿದೆ.
ಟ್ರಾಫಿಕ್ ಜಾಮ್: ಜೋಡೋ ಯಾತ್ರೆ ಹಿನ್ನೆಲೆಯಲ್ಲಿ ಬದಲಿ ಮಾರ್ಗ ಸೂಚಿಸಿ ಪೊಲೀಸರು ಸುಮ್ಮನಾದದ್ದರಿಂದ ಕೇರಳ ಮತ್ತು ಊಟಿ ಕಡೆ ತೆರಳುವ ಎಲ್ಲಾ ವಾಹನಗಳು ಬೇಗೂರು ರಾಷ್ಟ್ರೀಯ ಹೆದ್ದಾರಿಗೇ ಬಂದು ಕಿಮೀಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಇದನ್ನೂ ಓದಿ : ಕಾಂಗ್ರೆಸ್ ಪೋಸ್ಟರ್ ಹರಿದರೆ ಬಿಜೆಪಿಗರು ತಿರುಗಾಡದಂತೆ ಮಾಡುತ್ತೇವೆ: ಸಿದ್ದು ವಾರ್ನಿಂಗ್