ಚಾಮರಾಜನಗರ: ಜಿಲ್ಲಾ ದಸರಾದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಇಂದು ಸಂಜೆ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರು ವಿದ್ಯಾರ್ಥಿನಿಯಿಂದ ಚಾಲನೆ ಕೊಡಿಸಿದರು.
ದೀಪ ಬೆಳಗುವ ಮುನ್ನ ವೇದಿಕೆ ಮುಂಭಾಗ ಕುಳಿತಿದ್ದ ಬಾಲಕಿಯನ್ನು ಕರೆದು ದೀಪ ಬೆಳಗಿಸಿದರು. ಬಳಿಕ ಶಾಸಕರಾದ ಎನ್.ಮಹೇಶ್, ಸಿ.ಪುಟ್ಟರಂಗಶೆಟ್ಟಿ ಹಾಗೂ ನಿರಂಜನಕುಮಾರ್ ಜೊತೆಗೂಡಿ ನಗಾರಿ ಬಾರಿಸಿದರು.
ಚಂದನ್ ಶೆಟ್ಟಿ ಹಾಗೂ ಅನುಶ್ರೀ ಜೋಡಿಯ ಸಂಗೀತ ರಸ ಸಂಜೆ ಕಾರ್ಯಕ್ರಮ ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಯುವ ಸಮೂಹ ಜೋರಾಗಿ ಕಿರುಚುವ ಮೂಲಕ ಗಣ್ಯರ ಭಾಷಣವನ್ನು ಮೊಟಕುಗೊಳಿಸುವಂತೆ ಮಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಿ.ಎಸ್.ನಿರಂಜನಕುಮಾರ್, ಉದ್ಘಾಟನಾ ಭಾಷಣ ಮಾಡಿದ ಸಚಿವ ಸುರೇಶಕುಮಾರ್, ಶಾಸಕ ಮಹೇಶ್ ಮಾತನಾಡಲು ಪ್ರಾರಂಭಿಸುತ್ತಿದ್ದಂತೆ ಜೋರಾದ ಕೂಗು ಕೇಳಿಬರುತ್ತಿತ್ತು. ಶಾಸಕ ಪುಟ್ಟರಂಗಶೆಟ್ಟಿ ಅವರಂತೂ ನಿಮಗಾಗಿಯೇ ಕಾರ್ಯಕ್ರಮ ಮಾಡಿರುವುದು. ಎರಡು ನಿಮಿಷ ಕೇಳಿ. ಕಿರುಚಬೇಡಿ ಎಂದು ಮನವಿ ಮಾಡಿಕೊಂಡರು.
ವೇದಿಕೆ ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ನಗರದ ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿದರು.