ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಸಮೀಪದ ಶಿವನಸಮುದ್ರ ಸಮೂಹ ದೇವಾಲಯಗಳಾದ ಆದಿಶಕ್ತಿ ಮಾರಮ್ಮ ದೇವಾಲಯ, ಪ್ರಸನ್ನಾ ಮೀನಾಕ್ಷಿ ರಂಗನಾಥಸ್ವಾಮಿ ದೇವಾಲಯ ಹಾಗೂ ಮಧ್ಯರಂಗನಾಥಸ್ವಾಮಿ ದೇವಾಲಯದ ಹುಂಡಿಗಳ ಎಣಿಕೆ ನಡೆದಿದೆ. 113 ದಿನಗಳ ಬಳಿಕ ಸಮೂಹ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು 10,13,620 ರೂ. ಸಂಗ್ರಹವಾಗಿದೆ. ಇದಲ್ಲದೇ, 2.5 ಗ್ರಾಂ ಚಿನ್ನದ ಸರ, 23 ಗ್ರಾಂ ಬೆಳ್ಳಿ ಪದಾರ್ಥವನ್ನು ಭಕ್ತರು ಕಾಣಿಕೆ ರೂಪದಲ್ಲಿ ದೇವರಿಗೆ ಅರ್ಪಿಸಿದ್ದಾರೆ.
ಹುಂಡಿ ಎಣಿಕೆ ವೇಳೆ ದೇವರಿಗೆ ಬರೆದ ಎರಡು ಕೋರಿಕೆ ಪತ್ರಗಳು ಸಿಕ್ಕಿವೆ. ಒಂದು ಪತ್ರದಲ್ಲಿ ಕಾಲೇಜಿನಲ್ಲಿ ಯಾರೂ ತನ್ನ ಸುದ್ದಿಗೆ ಬರಬಾರದು, ಓದುವ ಜ್ಞಾನ ಕೊಡು, ಸರ್-ಮೇಡಂ ಯಾರೂ ತಪ್ಪಾಗಿ ತಿಳಿದುಕೊಳ್ಳದಂತೆ ಮಾಡು, ಹೆಚ್ಚು ಅಂಕ ಕೊಟ್ಟು ಪಾಸ್ ಮಾಡಿಸು ತಾಯಿ ಎಂದು ಕೋರಿರುವ ಚೀಟಿ ದೊರೆತಿದೆ.
ಮತ್ತೊಂದು ಪತ್ರದಲ್ಲಿ ಯುವತಿಯೊಬ್ಬಳು ಬರೆದಂತಿದ್ದು, ತಾನು ಇಚ್ಛೆ ಪಟ್ಟ ಹುಡುಗನನ್ನೇ ಮದುವೆ ಮಾಡಿಸುವ ಕೋರಿಕೆಯಂತೆ, 'ನಾ ಇಷ್ಟಪಟ್ಟ ಮನೆ ಸಿಗಲಿ, ಆ ಮನೆಯವರು ಒಳ್ಳೆಯದು ಮಾಡಲಿ, ಸಾಲ ತೀರಲಿ' ಎಂದು ಒಂದು ಪುಟ ತುಂಬೆಲ್ಲಾ ಬರೆದು ದೇವರಿಗೆ ಅರ್ಪಿಸಿದ್ದಾಳೆ.
ಇದನ್ನೂ ಓದಿ: 36 ದಿನಗಳಲ್ಲೇ ಮಲೆಮಹದೇಶ್ವರನಿಗೆ ಹರಿದುಬಂತು ಕೋಟ್ಯಂತರ ಕಾಣಿಕೆ