ಚಾಮರಾಜನಗರ: ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸೆರೆವಾಸ ಅನುಭವಿಸಿದ್ದ ಚಾಮರಾಜನಗರದ ಸ್ವಾತಂತ್ರ್ಯ ಹೋರಾಟಗಾರ್ತಿ ಲಲಿತಾ ಟಾಗೆಟ್ ವಯೋಸಹಜವಾಗಿ ನಿಧನರಾಗಿದ್ದಾರೆ.
ಲಲಿತ ಟಾಗೆಟ್ ಅವರು ಕಳೆದ 5 ರಂದು 91 ರ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಚಾಮರಾಜನಗರದಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಲಲಿತಾ ಟಾಗೆಟ್ ಅವರು ತಮ್ಮ 14 ನೇ ವಯಸ್ಸಿನಲ್ಲಿ ಸ್ವಾತಂತ್ರ್ಯದ ಘೋಷಣೆಗಳಿಂದ ಸ್ಪೂರ್ತಿಗೊಂಡು ಚಳವಳಿಗೆ ಧುಮುಕಿದ್ದರು. ಕುಟುಂಬಸ್ಥರ ಮಾತು ಕೇಳದೆ ಬ್ರಿಟಿಷರ ವಿರುದ್ಧದ ಮೆರವಣಿಗೆಗಳಲ್ಲಿ ಭಾಗವಹಿಸಿ, ಘೋಷಣೆಗಳನ್ನು ಕೂಗಿ ಗಮನ ಸೆಳೆದಿದ್ದರು.
ಪ್ರತಿಭಟನೆ, ಮೆರವಣಿಗೆಗಳಲ್ಲಿ ಮುಂದಿರುತ್ತಿದ್ದ ಟಾಗೆಟ್ ಅವರು ಕೆಲವೊಮ್ಮೆ ಪೊಲೀಸರ ಲಾಠಿಗಳನ್ನು ಕಿತ್ತುಕೊಂಡು ಬಿಸಾಡುತ್ತಿದ್ದರಂತೆ. ಪೊಲೀಸ್ ಠಾಣೆಗಳ ಬಳಿ ತೆರಳಿ ಅಲ್ಲಿನ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಪರಾರಿಯಾಗುತ್ತಿದ್ದರಂತೆ. ತನ್ನ ತಾಯಿ ಮನೆಯಲ್ಲಿ ಕೂಡಿ ಹಾಕಿದ್ರು ಕೂಡ ಛಾವಣಿ ಹೆಂಚು ಇಳಿಸಿ ಹೊರಹೋಗಿ ಪ್ರತಿಭಟನೆಯಲ್ಲಿ ಭಾಗಿಯಾಗುವುದು ಸಾಮಾನ್ಯವಾಗಿತ್ತು ಎಂದು ಲಲಿತಾ ಟಾಗೆಟ್ ಆಗಾಗ್ಗೆ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಿದ್ದರಂತೆ.
ಜನ್ಮದಿನ ಆಚರಿಸಿಕೊಂಡು ಕೆಲವೇ ದಿನಗಳಲ್ಲಿ ಧೀರ ಮಹಿಳೆ ಲಲಿತಾ ಟಾಗೆಟ್ ಅವರನ್ನು ನಾವು ಕಳೆದುಕೊಂಡಿದ್ದೇವೆ. ಸುದ್ದಿ ತಿಳಿಯುತ್ತಿದ್ದಂತೆ ಅನೇಕ ಗಣ್ಯರು ಲಲಿತಾ ಟಾಗೆಟ್ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ.
ಓದಿ: ಸ್ವಾತಂತ್ರ್ಯ ಹೋರಾಟಗಾರ ಮತ್ತು ನೆಹರೂ ಕಾರು ಚಾಲಕರಾಗಿದ್ದ ಶತಾಯುಷಿ ಮೋನಪ್ಪ ಗೌಡ ನಿಧನ