ಚಾಮರಾಜನಗರ: ಬೆಳೆ ಸಮೀಕ್ಷೆಯಲ್ಲಿ ಚಾಮರಾಜನಗರ ತೀರ ಹಿಂದುಳಿದುರುವುದರಿಂದ ಉಳಿದಿರುವ ಅವಧಿಯಲ್ಲಿ ಸರ್ವೇ ಮುಗಿಸುವ ಸವಾಲು ಕೃಷಿ ಇಲಾಖೆಗೆ ಎದುರಾಗಿದೆ.
ಬೆಳೆ ಸಮೀಕ್ಷೆಯಲ್ಲಿ ಜಿಲ್ಲೆ ಇದುವರೆವಿಗೆ ಶೇ.20.42 ರಷ್ಟು ಮಾತ್ರ ಪ್ರಗತಿ ಸಾಧಿಸಿದ್ದು ಇನ್ನು 12 ದಿನದೊಳಗೆ 80 ರಷ್ಟು ಬೆಳೆ ಸಮೀಕ್ಷೆ ಮುಗಿಸುವ ತುರ್ತು ಎದುರಾಗಿದ್ದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಚ್.ಟಿ.ಚಂದ್ರಕಲಾ ಈಗಾಗಲೇ ಗುರಿ ಮುಟ್ಟಲು ಸಿಬ್ಬಂದಿಗೆ ಟಾರ್ಗೆಟ್ ನೀಡಿದ್ದಾರೆ.
ಜಿಲ್ಲೆಯಲ್ಲಿ 4,30,109 ಜಮೀನುಗಳನ್ನು ಸರ್ವೇ ಮಾಡಬೇಕಿದ್ದು 87,837 ಮಂದಿ ರೈತರು ತಮ್ಮ ಬೆಳೆ ಅಪ್ಲೋಡ್ ಮಾಡಿದ್ದಾರೆ. ಇನ್ನೂ 3 ಲಕ್ಷದಷ್ಟು ಬಾಕಿ ಉಳಿದಿವೆ. ರೈತರೇ ಬೆಳೆ ಸಮೀಕ್ಷೆ ನಡೆಸಬೇಕಾದ್ದರಿಂದ ತಡವಾಗಿದೆ. ಎಲ್ಲರಲ್ಲೂ ಸ್ಮಾರ್ಟ್ ಫೋನ್ ಇಲ್ಲದಿರುವುದು, ನೆಟ್ವರ್ಕ್ ಸಮಸ್ಯೆ, ಪಿಆರ್ ಗಳ ಆಲಸ್ಯತನದಿಂದ ಸರ್ವೇ ಕಾರ್ಯ ಹಿಂದುಳಿದಿದೆ.
ಟಾರ್ಗೆಟ್ ಫಿಕ್ಸ್ : ಈಟಿವಿ ಭಾರತದೊಂದಿದೆ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಚ್.ಟಿ.ಚಂದ್ರಕಲಾ ಮಾತನಾಡಿ, 12 ದಿನಗಳಲ್ಲಿ ಮೂರು ಲಕ್ಷದಷ್ಟು ಬೆಳೆ ಸಮೀಕ್ಷೆ ಮಾಡಬೇಕುವ ಸವಾಲು ಎದುರಾಗಿರುವುದರಿಂದ ವಿಎ, ಪಿಆರ್ ಹಾಗೂ ಕೃಷಿ ಇಲಾಖೆ, ಕಂದಾಯ ಇಲಾಖೆ ಸಿಬ್ಬಂದಿ ತಂಡವನ್ನು ರೂಪಿಸಿದ್ದು ಪ್ರತಿಯೊಬ್ಬರಿಗೂ ಇಂತಿಷ್ಟು ಎಂದು ಟಾರ್ಗೆಟ್ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ಹಿಂದೆ ಬೆಳೆ ಸಮೀಕ್ಷೆ ವೇಳೆ ರೈತರು ತಮ್ಮ ಬೆಳೆಯೊಂದಿಗೆ ನಿಂತುಕೊಂಡ ಫೋಟೋ ಕಡ್ಡಾಯವಾಗಿತ್ತು.ಈಗ ಅದರ ಅಗತ್ಯವಿಲ್ಲ, ರೈತರಿಂದ ಸಹಿ ಮಾಡಿಸಿಕೊಂಡು ಪಿಆರ್ ಗಳೇ ಬೆಳೆ ಸಮೀಕ್ಷೆ ನಡೆಸಬಹುದಾದ್ದರಿಂದ ಸಮೀಕ್ಷೆ ಕಾರ್ಯ ಬೇಗ ಮುಗಿಯುವ ವಿಶ್ವಾಸ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಕೃಷಿ ಇಲಾಖೆಯು ಸಮೀಕ್ಷೆಗೆ ಇಂದಿನಿಂದ ವೇಗ ಹೆಚ್ಚಿಸಿದ್ದು 12 ದಿನಗಳಲ್ಲಿ ಬರೋಬ್ಬರಿ 3 ಲಕ್ಷ ಜಮೀನುಗಳ ಸರ್ವೇ ಮುಗಿಸುವ ಕಾರ್ಯ ನಿಜಕ್ಕೂ ಸವಾಲಿನ ಸಂಗತಿಯಾಗಿದೆ.