ಚಾಮರಾಜನಗರ: ಜಿಲ್ಲೆಯ ನಗರ, ಪಟ್ಟಣ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಗೂ ನೌಕರರು ನಡೆಸಿದ ಸಮೀಕ್ಷೆ ಪೂರ್ಣಗೊಂಡಿದ್ದು, 766 ಮಕ್ಕಳು ಶಾಲೆಯಿಂದ ಹಾಗೂ 2,359 ಮಕ್ಕಳು ಅಂಗನವಾಡಿಯಿಂದ ಹೊರಗುಳಿದಿರುವ ಅಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಕೋವಿಡ್ ಹಿನ್ನೆಲೆಯಲ್ಲಿ ಹದಗೆಟ್ಟ ಆರ್ಥಿಕ ಪರಿಸ್ಥಿತಿ, ಬಡತನದಿಂದಾಗಿ ಈ ಮಕ್ಕಳು ಶಾಲೆಯಿಂದ ಹೊರಗುಳಿಯಲು ಪ್ರಮುಖ ಕಾರಣವಾಗಿದೆ. ಶಾಲೆಯಿಂದ ಹೊರಗುಳಿದ ಮಕ್ಕಳಲ್ಲಿ ಕೊಳಗೇರಿ ಪ್ರದೇಶದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಸಮೀಕ್ಷೆ ವೇಳೆ ಕಂಡು ಬಂದಿದೆ.
ಹೀಗಿದೆ ಅಂಕಿ- ಅಂಶ
2011ರ ಜನಗಣತಿಯ ಪ್ರಕಾರ ಜಿಲ್ಲೆಯ ನಗರ ಹಾಗೂ ಪಟ್ಟಣಗಳಲ್ಲಿ 2,25,652 ಕುಟುಂಬಗಳಿದ್ದು, ಕಳೆದ ಹತ್ತು ವರ್ಷಗಳಲ್ಲಿ ಹೆಚ್ಚಾದ ಜನಸಂಖ್ಯೆ ಹಿನ್ನೆಲೆಯಲ್ಲಿ 3,298 ಕುಟುಂಬಗಳು ಹೆಚ್ಚುವರಿಯಾಗಿ ಕಂಡು ಬಂದಿದ್ದು, ಒಟ್ಟು ಜಿಲ್ಲೆಯ ನಗರ ಹಾಗೂ ಪಟ್ಟಣಗಳಲ್ಲಿ 2,28,950 ಕುಟುಂಬಗಳಿವೆ. ಈ ಕುಟುಂಬಗಳ 56,388 ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ.
ಆರು ವರ್ಷದೊಳಗಿನ 7,238 ಮಕ್ಕಳು ಅಂಗನವಾಡಿಗಳಲ್ಲಿ ದಾಖಲಾತಿ ಪಡೆದಿದ್ದರೆ, 2,359 ಮಕ್ಕಳು ಅಲ್ಲಿ ದಾಖಲಾತಿ ಪಡೆಯದೇ ಹೊರಗುಳಿದಿದ್ದಾರೆ. ಆರರಿಂದ 18 ವರ್ಷದೊಳಗಿನ 56,388 ಮಕ್ಕಳ ಪೈಕಿ 45,898 ಮಕ್ಕಳು ಜಿಲ್ಲೆಯ ಶಾಲೆ-ಕಾಲೇಜುಗಳಲ್ಲಿ ದಾಖಲಾತಿ ಪಡೆದಿದ್ದರೆ, 6 ರಿಂದ 14 ವರ್ಷದೊಳಗಿನ 180 ಮಕ್ಕಳು, 15 ರಿಂದ 18 ವರ್ಷದೊಳಗಿನ 586 ಮಕ್ಕಳು ಸೇರಿ ಒಟ್ಟು 766 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಇನ್ನು 127 ಮಕ್ಕಳು ಶಾಲೆಗೇ ದಾಖಲಾಗಿಲ್ಲ.
ಯಳಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ 2,057 ಕುಟುಂಬಗಳ ಪೈಕಿ 1,982 ಕುಟುಂಬಗಳು, (ಶೇ 96.35), ಹನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ 2,300 ಕುಟುಂಬಗಳಲ್ಲಿ 2,324 (ಶೇ 101.04) ಕುಟುಂಬಗಳು, ಗುಂಡ್ಲುಪೇಟೆ ಪುರಸಭೆ ವ್ಯಾಪ್ತಿಯಲ್ಲಿ 5,264 ಕುಟುಂಬಗಳು (ಶೇ 120.73), ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ 17,154 ಕುಟುಂಬ (ಶೇ 102.72), ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯಲ್ಲಿ 14,012 ಕುಟುಂಬಗಳ (ಶೇ 105.75) ಸಮೀಕ್ಷೆ ನಡೆಸಲಾಗಿದೆ.
ಸಮೀಕ್ಷೆಯಲ್ಲಿ ಜಿಲ್ಲೆಗೆ ಹತ್ತನೇ ಸ್ಥಾನ
ನಗರ ಸ್ಥಳೀಯ ಸಂಸ್ಥೆಗಳ ನೌಕರರ ಮೂಲಕ 2021ರ ಜನವರಿಯಲ್ಲಿ ಸಮೀಕ್ಷೆಯನ್ನು ಆರಂಭಿಸಲಾಗಿತ್ತು. ಕೋವಿಡ್ ಕಾರಣದಿಂದ ಸಮೀಕ್ಷೆ ಕಾರ್ಯ ವಿಳಂಬವಾಗಿತ್ತು. ಸದ್ಯ ಸಮೀಕ್ಷೆ ಪೂರ್ಣಗೊಂಡಿದ್ದು, 766 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ.
ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಯಲ್ಲಿ ರಾಜ್ಯದ 30 ಜಿಲ್ಲೆಗಳ ಪೈಕಿ ಬೀದರ್ ಜಿಲ್ಲೆ (2,666 ಮಕ್ಕಳು) ಮೊದಲ ಸ್ಥಾನ ಪಡೆದಿದೆ. ಶಿವಮೊಗ್ಗ ಜಿಲ್ಲೆಯು (2,299 ಮಕ್ಕಳು) ಎರಡನೇ ಸ್ಥಾನ ಪಡೆದಿದೆ. ಈ ಪೈಕಿ ಚಾಮರಾಜನಗರ ಜಿಲ್ಲೆಯು 10ನೇ ಸ್ಥಾನ ಪಡೆದಿದೆ. ಸಮೀಕ್ಷೆ ವರದಿಯನ್ನು ಶೀಘ್ರವೇ ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೆ.ಸುರೇಶ್ ತಿಳಿಸಿದ್ದಾರೆ.