ಬೀದರ್ : ಮುಂಗಾರು ಮಳೆ ಆರಂಭವಾಗಿದ್ದು, ಬಿತ್ತನೆ ಬೀಜಗಳ ಕೊರತೆ ಎದುರಾಗಿ ಸಕಾಲಕ್ಕೆ ಬಿತ್ತನೆ ಮಾಡಲಾಗದೆ ರೈತರು ಅಸಹಾಯಕರಾಗಿದ್ದಾರೆ. ಆದಷ್ಟು ಬೇಗ ಬಿತ್ತನೆ ಮಾಡಲು ಬೀಜ ವಿತರಣೆ ಮಾಡುವಂತೆ ಆಗ್ರಹಿಸಿದ್ದಾರೆ.
ಜಿಲ್ಲೆಯ ಔರಾದ್ ತಾಲೂಕಿನ ಚಿಂತಾಕಿ ಗ್ರಾಮದ ರೈತ ಸಂಪರ್ಕ ಕೇಂದ್ರದ ಸುತ್ತ ನಾಲ್ಕು ದಿನಗಳಿಂದ ಬೀಜಕ್ಕಾಗಿ ಕಾಯುತ್ತಿದ್ದರೂ ಸಿಗದೆ ಕಂಗ್ಗೆಟ್ಟಿರುವ ರೈತರು, ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಚಿಂತಾಕಿ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ಗ್ರಾಮಗಳ ರೈತರು ನಾಲ್ಕು ದಿನಗಳಿಂದ ಸೋಯಾಬಿನ್ ಬೀಜ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಆದರೆ ಕೃಷಿ ಇಲಾಖೆ ಅಧಿಕಾರಿಗಳು ಸೋಯಾಬಿನ್ ಬೀಜ ಮೊಳಕೆ ಪ್ರಮಾಣ ಕಡಿಮೆ ಇರುವ ಹಿನ್ನಲೆಯಲ್ಲಿ ಬೀಜ ವಿತರಣೆ ನಿಲ್ಲಿಸಿದ್ದಾರೆ. ಇದರಿಂದ ರೈತರು ಏನು ಮಾಡಬೇಕು ಎಂಬುದು ಹೇಳದೆ ಕಾಲ ಹರಣ ಮಾಡುತ್ತಿದ್ದಾರೆ ಎಂದು ಸ್ಥಳೀಯ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳಪೆ ಬೀಜದ ಗೊಂದಲದಲ್ಲಿ ರೈತರು :
ರೈತರಿಗೆ ಈಗಾಗಲೇ ವಿತರಿಸಲಾದ ಬೀಜಗಳ ಪೈಕಿ ಸೋಯಾಬಿನ್ ಬಿತ್ತನೆ ಬೀಜಗಳ ಮೊಳಕೆ ಪ್ರಮಾಣ ಕಡಿಮೆ ಇದೆ. ಹಾಗಾಗಿ ಕೃಷಿ ಇಲಾಖೆ ಪರ್ಯಾಯ ಬೀಜ ಖರೀದಿಸಿ ಬಿತ್ತನೆ ಮಾಡುವಂತೆ ಸಲಹೆ ನೀಡಿದಕ್ಕೆ ಬೀಜಗಳು ಖರೀದಿ ಮಾಡಿದ ರೈತರು ಸಾಕಷ್ಟು ಗೊಂದಲದಲ್ಲಿದ್ದಾರೆ. ಎಲ್ಲ ಸಿದ್ದತೆಗಳನ್ನು ಮಾಡಿಕೊಂಡು ಕೊನೆ ಘಳಿಗೆಯಲ್ಲಿ ಬೀಜ ಕಳಪೆ ಎಂದು ಹೇಳುತ್ತಿರುವ ಕೃಷಿ ಇಲಾಖೆ ಅಧಿಕಾರಿಗಳ ವರ್ತನೆಗೆ ವ್ಯಾಪಕ ಆಕ್ರೊಶ ವ್ಯಕ್ತವಾಗಿದೆ.
ಬಿತ್ತನೆ ಬೀಜಗಳ ಕೊರತೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕಿತ್ತು. ಕೊರೊನಾ ಅಟ್ಟಹಾಸದಿಂದ ನಲುಗಿ ಹೋಗಿ ಸಂಕಷ್ಟದಲ್ಲಿದ್ದ ರೈತರ ಸಹಾಯಕ್ಕೆ ಬರಬೇಕಾದ ಸರ್ಕಾರವೇ ಈ ರೀತಿಯಲ್ಲಿ ವರ್ತಿಸುವುದು ಸರಿಯಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.