ಜಬಲ್‌ಪುರ್(ಮಧ್ಯ ಪ್ರದೇಶ): ನ್ಯಾಯಾಂಗದ ಪ್ರಕ್ರಿಯೆಯನ್ನು ತುಚ್ಛವಾಗಿ ಕಂಡು, ಅವಹೇಳನ ಮಾಡಿದ್ದ ವ್ಯಕ್ತಿಗೆ ಮಧ್ಯ ಪ್ರದೇಶ ಹೈಕೋರ್ಟ್ ವಿಶಿಷ್ಟ ಶಿಕ್ಷೆ ನೀಡಿದೆ. ನ್ಯಾಯಾಂಗ ನಿಂದನೆ ಆರೋಪ ಹೊತ್ತ ವ್ಯಕ್ತಿ ಒಂದು ತಿಂಗಳಲ್ಲಿ ವಿವಿಧ ಪ್ರಕಾರದ 50 ಸಸಿಗಳನ್ನು ನೆಟ್ಟು, ಅವುಗಳನ್ನು ನೋಡಿಕೊಳ್ಳಬೇಕು ಎಂದು ಆದೇಶಿಸಿದೆ.
ನ್ಯಾಯಮೂರ್ತಿ ಸಂಜೀವ್ ಸಚ್‌ದೇವ್ ಮತ್ತು ನ್ಯಾಯಮೂರ್ತಿ ವಿನಯ್ ಸರಾಫ್ ಅವರಿದ್ದ ವಿಭಾಗೀಯ ಪೀಠ, ಡಿಸೆಂಬರ್ 2ರಂದು ಆರೋಪಿ ರಾಹುಲ್ ಸಾಹು ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಈ ಆದೇಶ ಹೊರಡಿಸಿತು.
ಪ್ರಕರಣದ ವಿವರ: ರಾಹುಲ್ ಸಾಹು ಎಂಬಾತನ ಪತ್ನಿ ಕೌಟುಂಬಿಕ ನ್ಯಾಯಾಲಯದಲ್ಲಿ ದೂರು ನೀಡಿದ್ದರು. ಇದನ್ನು ಸಾಹು ಟೀಕಿಸಿದ್ದ. ಸಾಮಾಜಿಕ ಮಾಧ್ಯಮಗಳಲ್ಲಿ ಕೋರ್ಟ್ನ ಚಿತ್ರಗಳು, ನ್ಯಾಯಾಂಗ ಪದ್ಧತಿಯನ್ನು ಅವಹೇಳನ ಮಾಡಿದ್ದ. ಈ ಬಗ್ಗೆ ಸಂಬಲಗಢದ ಜೆಎಂಎಫ್ಸಿ ಕೋರ್ಟ್‌ನಲ್ಲಿ ದೂರು ದಾಖಲಾಗಿತ್ತು.
ಈ ಬಗ್ಗೆ ಸ್ಪಷ್ಟೀಕರಣ ನೀಡಲು ಆರೋಪಿಗೆ ಕೋರ್ಟ್ ಸೂಚಿಸಿದ್ದರೂ, ಇದನ್ನು ಆತ ಲೆಕ್ಕಿಸಿರಲಿಲ್ಲ. ಬಳಿಕ ಅರ್ಜಿ ಹೈಕೋರ್ಟ್ ಅಂಗಳಕ್ಕೆ ಬಂದಿತ್ತು. ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಪೀಠವು, ಆರೋಪಿಗೆ ವಾಗ್ದಂಡನೆ ನೀಡಿದೆ.
ನ್ಯಾಯಾಂಗ ನಿಂದನೆ ಮಾಡಿದ ವ್ಯಕ್ತಿ 10ನೇ ತರಗತಿ ಓದಿದ್ದು, ಕೋರ್ಟ್ನ ಪ್ರಕ್ರಿಯೆ, ಕಾನೂನು ಜ್ಞಾನವಿಲ್ಲ. ಈಗಾಗಲೇ ಆತ ಬೇಷರತ್ ಕ್ಷಮೆಯಾಚಿಸಿದ್ದಾನೆ ಎಂದು ಆತನ ಪರ ವಕೀಲರು ಕೋರ್ಟ್ಗೆ ತಿಳಿಸಿದರು. ಇದನ್ನು ಅಂಗೀಕರಿಸಿದ ಪೀಠವು, ತಪ್ಪಿತಸ್ಥನ ನಡತೆಯನ್ನು ಗಮನದಲ್ಲಿಟ್ಟುಕೊಂಡು ಮೊರೆನಾ ಜಿಲ್ಲೆಯ ಸಂಬಲ್ಗಢ ಪ್ರದೇಶದಲ್ಲಿ ಸ್ಥಳೀಯ ಜಾತಿಯ 50 ಸಸಿಗಳನ್ನು ನೆಡುವಂತೆ ನಿರ್ದೇಶಿಸಿತು.
ಸಂಬಲ್ಗಢ ಅರಣ್ಯ ಉಪ ವಿಭಾಗಾಧಿಕಾರಿಯ ನೇತೃತ್ವದಲ್ಲಿ ಆರೋಪಿ ಸಸಿಗಳನ್ನು ನೆಡಬೇಕು. ಒಂದು ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಸಸಿಗಳು ಕನಿಷ್ಟ 4 ಅಡಿ ಎತ್ತರ ಇರಬೇಕು. ಭವಿಷ್ಯದಲ್ಲಿ ಕಾನೂನು ವಿಚಾರವಾಗಿ ಜಾಗರೂಕರಾಗಿರಲು ಇದೇ ವೇಳೆ ಸೂಚಿಸಿದೆ.
ಇದನ್ನೂ ಓದಿ: ಉತ್ತರ ಪ್ರದೇಶದ ಗ್ಯಾಂಗ್ಸ್ಟರ್ ಕಾಯ್ದೆ ಕ್ರೂರ, ಪರಿಶೀಲನೆ ಅಗತ್ಯ: ಸುಪ್ರೀಂ ಕೋರ್ಟ್