ಬೀದರ್ : ನಾಳೆ ಸಂಜೆ 8 ಗಂಟೆಯಿಂದ ಒಂದು ವಾರ ಬೀದರ್ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಲಾಕ್ಡೌನ್ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್ ಘೋಷಣೆ ಮಾಡಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಜುಲೈ 15ರ ಸಂಜೆ 8 ಗಂಟೆಯಿಂದ 22ರ ಬೆಳಗ್ಗೆ 5 ಗಂಟೆಯವರೆಗೆ ಬೀದರ್ ಜಿಲ್ಲೆಯಾದ್ಯಂತ ಲಾಕ್ಡೌನ್ ಜಾರಿಯಲ್ಲಿರುತ್ತದೆ. ಅಲ್ಲದೆ ಯಾದಗಿರಿ ಜಿಲ್ಲೆಯಲ್ಲಿ ಜುಲೈ 15ರಿಂದ 22ರ ಸಂಜೆ 5ಗಂಟೆಯವರೆಗೆ ಆಯಾ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಲಾಕ್ಡೌನ್ ಜಾರಿಯಲ್ಲಿರಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಸಚಿವ ಚೌಹಾಣ್ ಮನವಿ ಮಾಡಿದ್ದಾರೆ.
ಯಾವೆಲ್ಲಾ ಸೇವೆಗಳಿಗೆ ವಿನಾಯ್ತಿ?: ಕೊರೊನಾ ನಿಯಂತ್ರಣ ಹಿನ್ನೆಲೆ ಬೀದರ್ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಜಾರಿಗೆ ತರಲಾದ ಲಾಕ್ಡೌನ್ ವೇಳೆಯಲ್ಲಿ ಕಂಟೇನ್ಮೆಂಟ್ ಝೋನ್ಗಳಲ್ಲಿ ಆಸ್ಪತ್ರೆ ಹಾಗೂ ಔಷಧಿ ಅಂಗಡಿ ಹೊರತುಪಡಿಸಿ ಎಲ್ಲವೂ ನಿಷೇಧಿಸಲಾಗಿದೆ. ಜಾತ್ರೆ, ಸಂತೆ, ಮೆರವಣಿಗೆ,ಸಭೆ-ಸಮಾರಂಭ ಸೇರಿ ಜನ ಗುಂಪು ಸೇರುವುದು ಸಂಪೂರ್ಣ ನಿಷೇಧಿಸಲಾಗಿದೆ. ಬಾರ್, ರೆಸ್ಟೋರೆಂಟ್, ಲಿಕ್ಕರ್ ಔಟ್ಲೆಟ್ಸ್, ಬಟ್ಟೆ ಅಂಗಡಿ, ಬಂಗಾರದ ಅಂಗಡಿ ಸೇರಿ ಇನ್ನಿತರ ಎಲ್ಲಾ ತರಹದ ಅಂಗಡಿ-ಮುಗ್ಗಟ್ಟುಗಳನ್ನು ತೆರೆಯುವುದು ನಿಷೇಧಿಸಲಾಗಿದೆ. ಅನಗತ್ಯ ರಸ್ತೆಗೆ ಬರುವವರ ಮೇಲೆ ಕೇಸ್ ದಾಖಲಿಸಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.
ಅಲ್ಲದೆ ದಿನಸಿ, ತರಕಾರಿ, ಹಾಲು, ಹಣ್ಣು-ಹಂಪಲು, ಪೆಟ್ರೋಲ್ ಬಂಕ್ ಸೇರಿ ಅತ್ಯವಶ್ಯಕ ಸೇವೆಗಳು ತೆರೆದಿರುತ್ತವೆ. ಕೃಷಿ ತೋಟಗಾರಿಕೆಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳಿಗೆ ಬೇಕಾಗುವ ರಸಗೊಬ್ಬರ, ಕೀಟನಾಶಕ, ಬೀಜಗಳ ಉತ್ಪಾದನೆ, ಕೃಷಿ ಯಂತ್ರೊಪಕರಣಗಳು, ರಿಪೇರಿ ಸೇಂಟರ್ಗಳನ್ನು ತೆರೆಯಲು ಅವಕಾಶವಿದೆ. ಬ್ಯಾಂಕ್ಗಳು, ಪೋಸ್ಟ್ ಆಫೀಸ್, ಬಿಎಸ್ಎನ್ಎಲ್ ಕಚೇರಿಗಳು, ಸರ್ಕಾರಿ ಕಚೇರಿಗಳು ತೆರೆದಿರುತ್ತವೆ. ಸರಕು ಸಾಗಾಟ ಅಂತಾರಾಜ್ಯ ಚಲನೆಗೆ ಯಾವುದೇ ನಿರ್ಬಂಧವಿಲ್ಲ. ಪ್ರತ್ಯೇಕ ಅನುಮತಿ ಅಗತ್ಯವಿಲ್ಲ. ನೆರೆ ರಾಜ್ಯಗಳಿಂದ ಬರುವ ಜನರನ್ನು ಮಾರ್ಗಸೂಚಿ ಅನ್ವಯ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.