ಬೀದರ್: ಲಾಕ್ಡೌನ್ ಹೇರಿಕೆಯಿಂದ ಸಂಕಷ್ಟಕ್ಕೊಳಗಾಗಿರುವ ಎಲ್ಲ ರೈತರ ಖಾತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಿಸಾನ್ ಸಮ್ಮಾನ್ ಯೋಜನೆಯಡಿ ತಲಾ 20 ಸಾವಿರ ರೂ. ಜಮಾ ಮಾಡಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ.
ಔರಾದ್ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಿಸಾನ್ ಸಮ್ಮಾನ್ ಯೋಜನೆಡಿಯಲ್ಲಿ ಕೇಂದ್ರ ಸರ್ಕಾರ 6,000 ಹಾಗೂ ರಾಜ್ಯ ಸರ್ಕಾರ 4,000 ರೂ. ನಿಗದಿ ಮಾಡಿತ್ತು. ಇದರಲ್ಲಿ ಸಣ್ಣ ರೈತ ದೊಡ್ಡ ರೈತ ಅನ್ನದೇ ಎಲ್ಲ ರೈತರ ಖಾತೆಗಳಿಗೆ ಹೆಚ್ಚುವರಿಯಾಗಿ 20 ಸಾವಿರ ರೂ. ಜಮಾ ಮಾಡುವ ಮೂಲಕ ಲಾಕ್ಡೌನ್ನಿಂದ ಕಂಗೆಟ್ಟ ರೈತರ ಸಹಾಯಕ್ಕೆ ಬರಬೇಕು ಎಂದರು.
ಕೋವಿಡ್ -19 ನಿಯಂತ್ರಣಕ್ಕೆ ಲಾಕ್ಡೌನ್ ಅನಿವಾರ್ಯವಾಗಿತ್ತು. ಆದ್ರೆ ಈ ಲಾಕ್ಡೌನ್ನಿಂದ ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆ ಇಲ್ಲದೆ ನಾಶವಾಗಿವೆ. ರೈತರು ಹಾಕಿದ ಒಟ್ಟು ಬಂಡವಾಳದ ಶೇ10% ಕೂಡ ಬಂದಿಲ್ಲ. ಕಲ್ಲಂಗಡಿ, ತರಕಾರಿ, ಬಾಳೆ, ದ್ರಾಕ್ಷಿ, ಶುಂಠಿ ಹೀಗೆ... ಎಲ್ಲ ತೋಟಗಾರಿಕೆ ಬೆಳೆಗಳು ನಾಶವಾಗಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಲಾಕ್ಡೌನ್ನಿಂದಾಗಿ ಕುಶಲ ಕರ್ಮಿಗಳಾದ ಅಕ್ಕಸಾಲಿಗ, ಸವಿತಾ ಸಮಾಜ, ಬಡಿಗೇರ ವೃತ್ತಿ ಸ್ತಬ್ದವಾಗಿದೆ. ಸಣ್ಣ ಕೈಗಾರಿಕೆಗಳು ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು, ಬಡವರು, ಅಲೆಮಾರಿ ಜನಾಂಗದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಜೀವನ ಮಟ್ಟ ಸುಧಾರಿಸಬೇಕಾಗಿದೆ ಎಂದರು.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಡಿಯಲ್ಲಿ ವಿತರಿಸಲಾಗುತ್ತಿರುವ ಅಡುಗೆ ಅನಿಲ ಶೇ. 35 % ಜನ ಬಡವರಿಗೆ ತಲುಪುತ್ತಿದೆ. ಹೀಗಾಗಿ ಈ ಯೋಜನೆ ಎಲ್ಲ ಬಿಪಿಎಲ್ ಪಡಿತರದಾರರಿಗೆ ಅನ್ವಯವಾಗುವಂತೆ ಮುಂದಿನ ಮೂರು ತಿಂಗಳ ಕಾಲ ವಿಸ್ತರಿಸಬೇಕು ಎಂದು ಖಂಡ್ರೆ ಮನವಿ ಮಾಡಿದರು.
ಸರ್ಕಾರ ಘೋಷಣೆ ಮಾಡಿದ 1.70 ಲಕ್ಷ ಕೋಟಿ ರೂ. ಸಹಾಯ ಧನದ ಅನುದಾನ ನಾಲ್ಕು ಪಟ್ಟು ಹೆಚ್ಚಿಸಿ ಅಂದಾಜು 6 ಲಕ್ಷ ಕೋಟಿ ರೂ. ಕೋವಿಡ್-19 ಪರಿಹಾರ ನಿಧಿಗೆ ನೀಡುವ ಮೂಲಕ ಸಂಕಷ್ಟದಲ್ಲಿರುವ ಜನರ ಸಹಾಯಕ್ಕೆ ಬಳಕೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.