ಹೊಸಪೇಟೆ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸಾರ್ವಜನಿಕರ ಜೇಬಿಗೆ ಕತ್ತರಿ ಬೀಳುತ್ತಿದೆ. ನಷ್ಟದ ಹೊರೆಯನ್ನು ತಪ್ಪಿಸಲು ಜನರು ಸರ್ಕಾರಿ ಬಸ್ಗೆ ಮೊರೆ ಹೋಗುತ್ತಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಸ್‌ನಲ್ಲಿ ಸಂಚಾರ ಮಾಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. 2020 ಜನವರಿ ಹಾಗೂ ಫೆಬ್ರವರಿ ಹಾಗೂ 2021 ಜನವರಿ ಮತ್ತು ಫೆಬ್ರವರಿ ತಿಂಗಳುಗಳಿಗೆ ಹೋಲಿಕೆ ಮಾಡಿದರೆ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾದ ಮಾಹಿತಿ ಸಿಗುತ್ತಿದೆ. ಸದ್ಯ ಪೆಟ್ರೋಲ್ ದರ 95.50 ರೂ ಇದ್ದು, ಡಿಸೆಲ್ 88.70 ರೂ. ಇದೆ. ಹೊಸಪೇಟೆ ಎನ್ಇಕೆಎಸ್ಆರ್ಟಿಸಿ ವಿಭಾಗದಲ್ಲಿ 2020ರ ಜನವರಿಯಲ್ಲಿ ಒಂದು ದಿನಕ್ಕೆ ಸರಾಸರಿ 1.23 ಲಕ್ಷ ಪ್ರಯಾಣಿಕರು ಬಸ್‌ನಲ್ಲಿ ಸಂಚರಿಸಿದ್ದಾರೆ. 2021 ಜನವರಿಯಲ್ಲಿ 1.31 ಲಕ್ಷ ಜನರು ಪ್ರಯಾಣಿಸಿದ್ದಾರೆ.
2020ರ ಜನವರಿಯಲ್ಲಿ 451 ಬಸ್ಗಳನ್ನು ಕಾರ್ಯಾಚರಣೆ ಮಾಡಲಾಗಿತ್ತು. ಇದರಿಂದ ವಿಭಾಗಕ್ಕೆ 14.50 ಕೋಟಿ ಆದಾಯ ಬಂದಿತ್ತು. 2021 ಜನವರಿ 406 ಬಸ್ಗಳ ಕಾರ್ಯಾಚರಣೆ ಮಾಡಲಾಗಿದ್ದು, 14.32 ಕೋಟಿ ಆದಾಯ ಬಂದಿದೆ. ಕಡಿಮೆ ಬಸ್ ಕಾರ್ಯಾಚರಣೆ ಮಾಡಿದರೂ ಸಹ ವಿಭಾಗದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿರುವುದರಿಂದ ಆದಾಯ ಸಹ ಗಣನೀಯವಾಗಿ ಏರಿಕೆಯಾಗಿದೆ. 2020ರ ಫೆಬ್ರವರಿಯಲ್ಲಿ 451 ಬಸ್ಗಳನ್ನು ಕಾರ್ಯಾಚರಣೆ ಮಾಡಲಾಗಿತ್ತು. ಇದರಿಂದ 14.64 ಕೋಟಿ ಆದಾಯ ಬಂದಿತ್ತು. 2021ರ ಫೆಬ್ರವರಿಯಲ್ಲಿ 420 ಬಸ್ಗಳನ್ನು ಮಾತ್ರ ಓಡಿಸಲಾಗಿತ್ತಾದರೂ, 14.01 ಕೋಟಿ ರೂ. ಆದಾಯ ಹರಿದು ಬಂದಿದೆ. ಕಡಿಮೆ ಬಸ್ಗಳನ್ನು ಓಡಿಸಿದರೂ ಸಹ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸಿದ್ದಾರೆ ಎಂಬ ಮಾಹಿತಿ ಇದೆ.