ಬಳ್ಳಾರಿ: ಜಿಲ್ಲೆಯ ಗಣಿಬಾಧಿತ ಪ್ರದೇಶಗಳಲ್ಲಿ ಪುನರುಜ್ಜೀವನ ಹಾಗೂ ಪುನರುತ್ಥಾನ (ಆರ್ &ಆರ್) ಕಲ್ಪಿಸುವ ನಿಟ್ಟಿನಲ್ಲಿ ಸ್ಥಾಪಿತವಾದ ಜಿಲ್ಲಾ ಖನಿಜ ನಿಧಿಯಲ್ಲಿ ಬಳ್ಳಾರಿಗೆ ಬಹುಪಾಲು ದೊರೆಯಲಿದ್ದು, ನೂತನ ವಿಜಯನಗರ ಜಿಲ್ಲೆಗೆ ಕಡಿಮೆ ಅನುದಾನ ದೊರಕುವ ಸಾಧ್ಯತೆಯಿದೆ.
ಅಖಂಡ ಬಳ್ಳಾರಿ ಜಿಲ್ಲೆಯನ್ನು ಒಳಗೊಂಡಂತೆ ಬಳ್ಳಾರಿ, ಸಂಡೂರು ಹಾಗೂ ಹೊಸಪೇಟೆ ತಾಲೂಕಿನ ಗಣಿಬಾಧಿತ ಪ್ರದೇಶಗಳಲ್ಲಿ ಪುನರುಜ್ಜೀವನ ಮತ್ತು ಪುನರುತ್ಥಾನ ಕಲ್ಪಿಸುವ ಸಲುವಾಗಿ ಜಿಲ್ಲಾ ಖನಿಜ ನಿಧಿಯನ್ನು ಪ್ರತಿಷ್ಠಾಪಿಸಲಾಗಿದೆ. ಗಣಿ ಮಾಲೀಕರಿಂದ ಸಂಗ್ರಹಿಸಲಾದ ಈ ಅನುದಾನ ಸಾವಿರಾರು ಕೋಟಿ ರೂಪಾಯಿ ದಾಟಿದೆ.
ಸರ್ಕಾರ ಅಖಂಡ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ನೂತನ ಜಿಲ್ಲೆಯನ್ನಾಗಿ ಘೋಷಿಸಿದೆ. ಬಳ್ಳಾರಿ ಜಿಲ್ಲೆಯ ವ್ಯಾಪ್ತಿಗೆ ಐದು ತಾಲೂಕು ಹಾಗೂ ವಿಜಯನಗರ ಜಿಲ್ಲೆಯ ವ್ಯಾಪ್ತಿಗೆ ಆರು ತಾಲೂಕುಗಳು ಬರಲಿವೆ. ಮುಖ್ಯವಾಗಿ ಬಳ್ಳಾರಿ ಮತ್ತು ಸಂಡೂರು ತಾಲೂಕು ಬಳ್ಳಾರಿ ಜಿಲ್ಲೆಯ ವ್ಯಾಪ್ತಿಗೆ ಒಳಪಡಲಿವೆ. ಹೀಗಾಗಿ, ಡಿಎಂಎಫ್ ಫಂಡ್ನ ಬಹುಪಾಲು ಬಳಕೆಗೆ ಬಳ್ಳಾರಿ ಜಿಲ್ಲೆಗೆ ಅವಕಾಶ ದೊರೆಯುವ ಸಾಧ್ಯತೆಯಿದೆ. ನೂತನ ವಿಜಯನಗರ ಜಿಲ್ಲೆಯ ವ್ಯಾಪ್ತಿಗೆ ಕೇವಲ ಹೊಸಪೇಟೆ ಬರುವುದರಿಂದ ಕಡಿಮೆ ಪ್ರಮಾಣದ ಅನುದಾನ ಬಳಕೆಗೆ ಮಾತ್ರ ಅವಕಾಶ ದೊರೆಯಲಿದೆ.
ಓದಿ : ಪೆಟ್ರೋಲ್, ಡಿಸೇಲ್, ಎಲ್ಪಿಜಿ ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಭಾರಿ ಪ್ರತಿಭಟನೆ
ಹೆಚ್ಚು ಅನುದಾನ ದೊರೆಯುದರಿಂದ ಬಳ್ಳಾರಿ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಐದು ತಾಲೂಕಗಳನ್ನು ಮಾದರಿ ತಾಲೂಕುಗಳನ್ನಾಗಿ ಮಾಡುವ ಅವಕಾಶ ಈ ತಾಲೂಕುಗಳ ಶಾಸಕರಿಗೆ ಇದೆ. ಈ ಕುರಿತು ಪ್ರತಿಕ್ರಿಯಿಸಿರುವ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ಬಳ್ಳಾರಿ ಜಿಲ್ಲೆಯ ಐದು ತಾಲೂಕುಗಳನ್ನು ಡಿಎಂಎಫ್ ಹಾಗೂ ಕೆಎಂಆರ್ಇಸಿ ಅನುದಾನವನ್ನು ಬಳಕೆ ಮಾಡಿಕೊಂಡು ಮಾದರಿ ತಾಲೂಕುಗಳನ್ನಾಗಿ ಅಭಿವೃದ್ಧಿಪಡಿಸುವ ಅವಕಾಶ ಒದಗಿ ಬಂದಿದೆ. ಶೇ. 80ರಷ್ಟು ಅನುದಾನ ಬಳ್ಳಾರಿ ಜಿಲ್ಲೆಗೆ ಬರಲಿದೆ. ಶೇ. 20ರಷ್ಟು ಅನುದಾನ ಮಾತ್ರ ವಿಜಯನಗರ ಜಿಲ್ಲೆಗೆ ದೊರೆಯಲಿದೆ ಎಂದರು.