ಹೊಸಪೇಟೆ( ಬಳ್ಳಾರಿ) : ಮಾಜಿ ಶಾಸಕ ರತನ್ ಸಿಂಗ್ (62) ಹೃದಯಾಘಾತದಿಂದ ನಗರದ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.
ಮಕ್ಕಳಾದ ಅರಣ್ಯ ಸಚಿವ ಆನಂದ ಸಿಂಗ್, ಜಿ.ಪಂ. ಸದಸ್ಯ ಪ್ರವೀಣ್ ಸಿಂಗ್, ಜೆಡಿಎಸ್ ಮುಖಂಡ ದೀಪಕ್ ಕುಮಾರ ಸಿಂಗ್, ದೀಲಿಪ್ ಸಿಂಗ್, ಓರ್ವ ಪುತ್ರಿ ಹಾಗೂ ಮೂವರು ಸಹೋದರಿಯರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಹಿನ್ನಲೆ : 1989ರಲ್ಲಿ ಶಾಸಕರಾಗಿದ್ದ ಗುಜ್ಜಲ ಹನುಮಂತಪ್ಪನವರು ನಿಧನ ಹೊಂದಿದ ಬಳಿಕ 1991ರಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಬಿಜೆಪಿ ಪಕ್ಷದ ಅಭ್ಯರ್ಥಿ ಶಂಕರಗೌಡ ವಿರುದ್ಧ ಕೇವಲ 400 ಮತಗಳಿಂದ ಜಯಗಳಿಸಿ ಶಾಸಕರಾದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಇತ್ತೀಚೆಗೆ ಸಚಿವ ಆನಂದ ಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ನಗರದ ಅವರ ನಿವಾಸದ ಹಿಂಭಾಗದಲ್ಲಿ ಬುಧವಾರ ಅಂತ್ಯಕ್ರಿಯೆ ನಡೆಯಲಿದೆ.
ಸಂತಾಪ: ಮಾಜಿ ಶಾಸಕ ರತನ್ ಸಿಂಗ್ ಅವರ ನಿಧನಕ್ಕೆ ನಗರದ ಕೊಟ್ಟೂರು ಸಂಸ್ಥಾನ ಮಠದ ಪೀಠಾಧಿಪತಿ ಡಾ.ಸಂಗನಬಸವ ಮಹಾಸ್ವಾಮಿಜಿ, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾಂದ ಸ್ವಾಮಿಜಿ, ಹಂಪಿ ಗಾಯತ್ರಿ ಪೀಠಾಧಿಪತಿ ಶ್ರೀ ದಯಾನಂದ ಪುರಿ ಸ್ವಾಮೀಜಿ, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿಜಿ ಸೇರಿದಂತೆ ನಗರದ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಹಾಗೂ ಗಣ್ಯರು ಸಂತಾಪ ಸೂಚಿಸಿದ್ದಾರೆ.