ಬಳ್ಳಾರಿ: ಬೆಳೆ ಸಮೀಕ್ಷೆ ಉತ್ಸವದ ಅಂಗವಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್ , ಕೂಡ್ಲಿಗಿ ತಾಲೂಕಿನ ಖಾನಾಹೊಸಳ್ಳಿ ಸಮೀಪದ ಹುಲಿಕೆರೆ ಗ್ರಾಮದ ಶರಣಪ್ಪ ಅವರ ಜಮೀನಿನಲ್ಲಿ ಬೆಳೆ ಸಮೀಕ್ಷೆ ಕಾರ್ಯವನ್ನ ವೀಕ್ಷಿಸಿದರು.
ರೈತ ಗಿರೀಶ್ ಅವರು ಬೆಳೆ ಸಮೀಕ್ಷೆ ಆ್ಯಪ್ ನಲ್ಲಿ ದಾಖಲಿಸುವ ಬಗೆ ಹಾಗೂ ತಾವು ಸಾವಯವ ಗೊಬ್ಬರ ಬಳಿಸಿಕೊಂಡು ಸೂರ್ಯಕಾಂತಿ ಬೆಳೆ ಬೆಳೆದಿರುವುದರ ವಿವರವನ್ನು ಸಚಿವ ಪಾಟೀಲ್ ಅವರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್ , ಬೆಳೆ ಸಮೀಕ್ಷೆ ಉತ್ಸವವು ರಾಜ್ಯಸರ್ಕಾರದ ಪ್ರತಿಷ್ಠಿತ ಯೋಜನೆಯಾಗಿದೆ. ಈಗಾಗಲೇ ಸಮೀಕ್ಷೆಯು ರಾಜ್ಯಾದ್ಯಂತ ಆರಂಭವಾಗಿದ್ದು, ಈ ಬಾರಿಯ ಬೆಳೆ ಸಮೀಕ್ಷೆ ಕಾರ್ಯದಲ್ಲಿ ರೈತರೇ ಸ್ವತಃ ತಮ್ಮ ಜಮೀನಿನಲ್ಲಿ ತಾವು ಬೆಳೆದ ಬೆಳೆಯ ವಿವರವನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ರೈತರು ಮುಂದೆ ಬಂದು ಆ್ಯಪ್ ನಲ್ಲಿ ಬೆಳೆ ವಿವರ ದಾಖಲಿಸಬೇಕು ಎಂದು ಅವರು ಮನವಿ ಮಾಡಿದರು.
ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರವನ್ನು ದಾಖಲಿಸುವ ಸಂದರ್ಭದಲ್ಲಿ ತಮ್ಮ ಜಮೀನಿನಲ್ಲಿ ಪಾಳು ಬಿದ್ದಿರುವ ಪ್ರದೇಶ, ಕಟಾವಾದ ಪ್ರದೇಶ, ಕೃಷಿಯೇತರ ಬಳಕೆಗೆ (ಕೊಟ್ಟಿಗೆ, ಕೃಷಿ ಹೊಂಡ, ಮನೆ ಇತರೆ) ಬಳಕೆಯಾದ ಪ್ರದೇಶದ ವಿವರವನ್ನು ಸಹ ದಾಖಲಿಸಬೇಕಾಗಿರುತ್ತದೆ. ತಾವು ಬೆಳೆದ ಪ್ರತಿ ಬೆಳೆಯ ವಿಸ್ತೀರ್ಣದ ಜೊತೆಗೆ ಪ್ರತಿ ಬೆಳೆಯ 2 ಛಾಯಾ ಚಿತ್ರಗಳನ್ನು ತೆಗೆದು ಅಪ್ಲೋಡ್ ಮಾಡಬೇಕಾಗಿರುತ್ತದೆ. ಹೀಗೆ ಅಪ್ಲೋಡ್ ಮಾಡಲಾದ ಮಾಹಿತಿಯನ್ನು ಪ್ರತಿ ಗ್ರಾಮಕ್ಕೆ ನೇಮಿಸಲಾದ ಸರ್ಕಾರಿ ಅಧಿಕಾರಿಗಳು ಪರಿಶೀಲಿಸಿ ಅನುಮೋದಿಸಲಿದ್ದಾರೆ ಎಂದರು.