ಬಳ್ಳಾರಿ: ಕರ್ನಾಟಕ - ಆಂಧ್ರಪ್ರದೇಶದ ಗಡಿಭಾಗಕ್ಕೆ ಅಂಟಿಕೊಂಡಿರುವ ಚೆಳ್ಳಗುರ್ಕಿ ಎರಿತಾತನ ಸನ್ನಿಧಿಯಲ್ಲಿ ಗಂಗಾ ಬ್ಯಾನರ್ ಅಡಿಯಲ್ಲಿ 'ಚೆಳ್ಳಗುರ್ಕಿ ಎರಿತಾತಯ್ಯ ಮಹಿಮೆ' ಎಂಬ ಸಿನಿಮಾ ಚಿತ್ರೀಕರಣ ಆರಂಭವಾಗಿದೆ.
ಕನ್ನಡ ಚಲನಚಿತ್ರ ರಂಗದ ಹಿರಿಯ ನಟ ಶ್ರೀನಿವಾಸ ಮೂರ್ತಿ ಅವರು ಎರಿತಾತನ ಪಾತ್ರದಲ್ಲಿ ಕಾಣಿಸಿಕೊಂಡು ವಿಶೇಷ ಗಮನ ಸೆಳೆದಿದ್ದಾರೆ. ಚಿತ್ರಕಥೆ, ಹಾಡು, ಸಂಭಾಷಣೆ, ಸಾಹಿತ್ಯ ರಚನೆ ಹಾಗೂ ಚಿತ್ರ ನಿರ್ದೇಶನದ ಜವಾಬ್ದಾರಿಯನ್ನು ಬಿ.ಎ. ಪುರುಷೋತ್ತಮ ಓಂಕಾರ ಹೊತ್ತಿದ್ದಾರೆ. ಕಳೆದ ಎರಡುಮೂರು ದಿನಗಳಿಂದ ಈ ಎರಿತಾತನ ಮಹಿಮೆ ಎಂಬ ಸಿನಿಮಾ ಶೂಟಿಂಗ್ ಸದ್ದಿಲ್ಲದೇ ಚೆಳ್ಳಗುರ್ಕಿ ಎರಿತಾತನ ಸನ್ನಿಧಿಯಲ್ಲಿ ನಡೆಯುತ್ತಿದೆ. ಸಿನಿಮಾದಲ್ಲಿ ರಂಗಭೂಮಿ ಕಲಾವಿದ ರಮೇಶಗೌಡ ಪಾಟೀಲ ಸೇರಿದಂತೆ ಸ್ಥಳೀಯ ಕಲಾವಿದರನ್ನು ಪೋಷಕ ಹಾಗೂ ಸಹ ಪೋಷಕ ನಟರನ್ನಾಗಿ ಬಳಸಿಕೊಳ್ಳಲಾಗಿದೆ.
ಮುಂದಿನ 35 ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು, ಇದೊಂದು ಧಾರ್ಮಿಕ ಚರಿತ್ರೆಯ ಹಿನ್ನೆಲೆಯುಳ್ಳ ಕಥೆಯಾಗಿದೆ. ಕೇವಲ ಕಮರ್ಷಿಯಲ್ ಆಧಾರಿತ ಚಿತ್ರಗಳನ್ನು ಮಾಡೋದು ಬೇರೆ. ಆಗಾಗ, ಇಂಥ ಧಾರ್ಮಿಕ ಚರಿತ್ರೆಯನ್ನಾಧರಿಸಿ ಸಿನಿಮಾ ಮಾಡೋದು ಮನಸ್ಸಿಗೆ ಸಂತೋಷ ತರುತ್ತದೆ ಎಂದು ಚಿತ್ರ ನಿರ್ದೇಶಕ ಬಿ.ಎ. ಪುರುಷೋತ್ತಮ ಓಂಕಾರ ತಿಳಿಸಿದ್ದಾರೆ.
ಕನ್ನಡ ಚಲನಚಿತ್ರರಂಗದಲ್ಲಿ ಈವರೆಗೆ ಅಂದಾಜು 360ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾನು ನಟನಾಗಿ ನಟಿಸಿರುವೆ. ಅದರಲ್ಲೂ ಈ ಪಾತ್ರ ಬಹಳ ಅಚ್ಚುಮೆಚ್ಚಿನ ಪಾತ್ರವಾಗಿದೆ. ಕರ್ನಾಟಕ - ಆಂಧ್ರಪ್ರದೇಶದ ಗಡಿಭಾಗದ ಜನರ ಆರಾಧ್ಯ ದೈವ ಎರಿತಾತನವರ ಪಾತ್ರದಲ್ಲಿ ನಟಿಸೋದು ಎಂದರೆ ಬಹಳ ದೊಡ್ಡ ಮಾತು. ಅಂತಹ ಪಾತ್ರವನ್ನು ನಿರ್ವಹಿಸುವ ಜವಾಬ್ದಾರಿ ನನಗೆ ಸಿಕ್ಕಿದೆ ಎಂದು ಹಿರಿಯ ನಟ ಜೆ.ಕೆ. ಶ್ರೀನಿವಾಸ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಓದಿ: ಬಿಗ್ ಬಾಸ್ ನಲ್ಲಿ ಭಾಗವಹಿಸುತ್ತೀರಾ ಎಂಬ ಪ್ರಶ್ನೆಗೆ ಹಿತಾ ಹೇಳಿದ್ದೇನು?
ಎರಿತಾತ ಜೀವ ಸಮಾಧಿ ಟ್ರಸ್ಟ್ನ ಅಧ್ಯಕ್ಷ ಬಾಳನ ಗೌಡರು ಮಾತನಾಡಿ, ಗಡಿ- ಗಣಿನಾಡಿನ ಆರಾಧ್ಯ ದೈವ ಎರಿತಾತನವರ ಮಹಿಮೆ ಸಿನಿಮಾ ಮಾಡೋದು ನನಗೆ ಬಹಳಷ್ಟು ಖುಷಿ ತಂದಿದೆ ಎಂದು ತಿಳಿಸಿದರು.