ಬಳ್ಳಾರಿ: ರಾಜ್ಯ ಸರ್ಕಾರವು ಜಿಂದಾಲ್ ಉಕ್ಕು ಕಾರ್ಖಾನೆಗೆ ಅಂದಾಜು 3,667 ಭೂಮಿ ಪರಭಾರೆ ಮಾಡುವುದನ್ನು ಶಾಸಕ ಬಿ ಎಸ್ ಆನಂದ ಸಿಂಗ್ ವಿರೋಧ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಹೊಸಪೇಟೆ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ ಅಥವಾ ಮಂಗಳವಾರ ಜಿಲ್ಲೆಯ ಹಿರಿಯ ಶಾಸಕರು, ಸಚಿವರೊಂದಿಗೆ ಚರ್ಚಿಸಿ ಪಕ್ಷಾತೀತವಾಗಿ ಹೋರಾಟ ಮಾಡಲು ನಾವೆಲ್ಲ ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ. ಜಿಂದಾಲ್ ಉಕ್ಕು ಕಾರ್ಖಾನೆಗೆ ಯಾವುದೇ ಕಾರಣಕ್ಕೂ ಭೂಮಿ ಪರಭಾರೆ ಮಾಡಬಾರದು. ಗುತ್ತಿಗೆ ಹಾಗೂ ಮಾರಾಟ ಕ್ರಯದ (ಲೀಸ್ ಕಂ ಸೇಲ್ ಡೀಡ್) ಅಡಿಯಲ್ಲೇ ಭೂಮಿಯನ್ನು ಮುಂದುವರಿಸಬೇಕು ಎಂದು ಶಾಸಕ ಬಿ ಎಸ್ ಆನಂದ್ ಸಿಂಗ್ ಪ್ರತಿಕ್ರಿಯಿಸಿದರು.
ಭೂಮಿ ಪರಭಾರೆ ಮಾಡೋದಕ್ಕೆ ಈ ಸರ್ಕಾರ ಮುಂದಾಗಿರೋದರಲ್ಲಿ ಏನೋ ಸಂಶಯವಿದೆ. ಭೂಮಿ ಪರಭಾರೆಯಲ್ಲಿ ದೊಡ್ಡಮಟ್ಟದ ಕಿಕ್ ಬ್ಯಾಕ್ ನಡೆದಿದೆ ಎಂಬುದು ಜಗಜ್ಜಾಹೀರಾಗಿದೆ. ಕಿಕ್ ಬ್ಯಾಕ್ ವಿಚಾರ ಮಾಧ್ಯಮಗಳಿಗೂ ಗೊತ್ತಿದೆ ಎಂದು ಶಾಸಕ ಆನಂದ ಸಿಂಗ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಜಿಲ್ಲೆಯ ರೈತರ ಹಿತದೃಷ್ಟಿಯಿಂದ ನಾನಂತೂ ಪಕ್ಷಾತೀತವಾಗಿ ಹೋರಾಟ ಮಾಡಲು ಸಿದ್ಧನಿರುವೆ. ಮಾಜಿ ಶಾಸಕರು, ರೈತ ಸಂಘಟನೆಗಳು ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳೂ ಕೂಡ ಈ ಹೋರಾಟದಲ್ಲಿ ಪಾಲ್ಗೊಳ್ಳುತ್ತವೆ ಎಂದರು.
ತೋರಣಗಲ್ಲಿನಿಂದ ಬೆಂಗಳೂರಿಗೆ ಪಾದಯಾತ್ರೆ
ಈ ಹಿಂದೆ ಗಣಿ ಅಕ್ರಮದ ವಿರುದ್ಧ ಕಾಂಗ್ರೆಸ್ ಪಕ್ಷ ಬೆಂಗಳೂರಿನಿಂದ ಬಳ್ಳಾರಿವರೆಗೂ ಪಾದಯಾತ್ರೆ ನಡೆಸಿತ್ತು. ಅದೇ ರೀತಿ ಸಂಡೂರು ತಾಲೂಕಿನ ತೋರಣಗಲ್ಲು ಜಿಂದಾಲ್ ಕಾರ್ಖಾನೆಯಿಂದ ಬೆಂಗಳೂರಿನವರೆಗೂ ಪಾದಯಾತ್ರೆ ಮಾಡೋದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು. ನನ್ನ ಈ ಹೋರಾಟ ಪಕ್ಷಾತೀತವಾದದು. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ಪರವಾದ ಹೋರಾಟ ನನ್ನದಲ್ಲ. ಜಿಲ್ಲೆಯ ಹಿತಾಸಕ್ತಿಗಾಗಿ ನಾನು ಈ ಹೋರಾಟದಲ್ಲಿ ಭಾಗಿಯಾಗುವೆ. ಹೋರಾಟದ ನೇತೃತ್ವ ವಹಿಸಿಕೊಳ್ಳುವ ಸಮಯ ಬಂದರೆ ಖಂಡಿತ ನೇತೃತ್ವ ವಹಿಸಿಕೊಳ್ಳುವೆ ಎಂದರು.
ಈ ಜಿಂದಾಲ್ ಉಕ್ಕು ಕಾರ್ಖಾನೆಯು ಈವರೆಗೂ ಎಷ್ಟುಮಂದಿ ಸ್ಥಳೀಯರಿಗೆ ಉದ್ಯೋಗ ಅವಕಾಶ ಕಲ್ಪಿಸಿದೆ. ವಾಸ್ತವವಾಗಿ ಜಿಂದಾಲ್ ಕಾರ್ಖಾನೆ ಹೊಂದಿರುವ ಭೂಮಿಯಾದ್ರೂ ಎಷ್ಟು ಎಂಬುದರ ಬಗ್ಗೆ ಸರ್ಕಾರ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
ನನ್ನ ಪತ್ರಕ್ಕೆ ಬೆಲೆ ಕೊಡದ ಜಿಂದಾಲ್ಗೆ ನಾವ್ಯಾಕೆ ಭೂಮಿ ಕೊಡಬೇಕು?
ನಾನು ಮೂರು ಬಾರಿ ಶಾಸಕನಾಗಿದ್ದೆ. ಈವರೆಗೂ ಸುಮಾರು 5,000ಕ್ಕೂ ಅಧಿಕ ಯುವಜನರಿಗೆ ಉದ್ಯೋಗ ಅವಕಾಶ ನೀಡುವಂತೆ ಶಿಫಾರಸು ನೀಡಿರುವೆ. ಆದರೆ, ಈವರೆಗೆ ಒಬ್ಬನೇ ಒಬ್ಬ ಯುವಕ ನನ್ನ ಬಂದು ಕೂಡ ನನಗೆ ಉದ್ಯೋಗ ದೊರತಿದೆ ಎಂದು ಹೇಳಿಲ್ಲ. ಆದ್ರೀಗ ನನ್ನ ಪತ್ರಕ್ಕೆನೇ ಕಿಮ್ಮತ್ತು ನೀಡದ ಜಿಂದಾಲ್ ಸಂಸ್ಥೆಗೆ ನಾವ್ಯಾಕೆ ಭೂಮಿ ಕೊಡಬೇಕು ಎಂದು ಪ್ರಶ್ನಿಸಿದ್ದಾರೆ.