ನಾಯಿ ನಿಯತ್ತಿನ ಪ್ರಾಣಿ, ನಾನು ಜನರಿಗೆ ನಿಯತ್ತಿನಿಂದ ಕೆಲಸ ಮಾಡುತ್ತಿರುವೆ: ಸಿದ್ದರಾಮಯ್ಯಗೆ ಸಿಎಂ ತಿರುಗೇಟು - ನಾಯಿ ನಿಯತ್ತಿನ ಪ್ರಾಣಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ ಎದುರು ನಾಯಿ ಮರಿ ತರ ಮಾಡುತ್ತಾರೆ, ಗಡಗಡ ಎಂದು ನಡುಗುತ್ತಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಬೊಮ್ಮಾಯಿ ಬಳ್ಳಾರಿಯಲ್ಲಿ ತಿರುಗೇಟು ನೀಡಿದ್ದಾರೆ.
ಬಳ್ಳಾರಿ: ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ನಾಯಿ ಮರಿ ಪದ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಳ್ಳಾರಿಯಲ್ಲಿ ಮುಖ್ಯಮಂತ್ರಿಗಳು ಪ್ರತಿಕ್ರಿಯೆ ನೀಡಿದ್ದಾರೆ. 'ಸಿದ್ದರಾಮಯ್ಯ ಅವರ ಹೇಳಿಕೆಗೆ ಜನರೇ ತಕ್ಕ ಉತ್ತರ ನೀಡುತ್ತಾರೆ. ಆ ಹೇಳಿಕೆ ಅವರ ವ್ಯಕ್ತಿತ್ವವನ್ನು ತೋರುತ್ತದೆ. ನಾಯಿ ನಿಯತ್ತಿನ ಪ್ರಾಣಿ, ನಾನು ಜನರಿಗೆ ನಿಯತ್ತಾಗಿ ಕೆಲಸ ಮಾಡುತ್ತಿರುವೆ, ನಿಯತ್ತನ್ನು ಜನರ ಪರವಾಗಿ ಉಳಿಸಿಕೊಂಡು ಹೋಗುವೆ' ಎಂದು ಹೇಳುವ ಮೂಲಕ ಪ್ರತಿಪಕ್ಷ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ ಅವರ ಹಾಗೆ ಸಮಾಜ ಒಡೆಯುವ ಕೆಲಸ ಮಾಡಲ್ಲ, ಸೌಭಾಗ್ಯ ಕೊಡುತ್ತೇವೆ ಎಂದು ಹೇಳಿ ದೌರ್ಭಾಗ್ಯ ಕೊಟ್ಟಿಲ್ಲ. ಸುಳ್ಳು ಹೇಳಿಲ್ಲ, ಆ ತರಹದ ಕೆಲಸ ಮಾಡಿಲ್ಲ ಎಂದರು.
ಬಹಿರಂಗ ಚರ್ಚೆಗೆ ಸಿದ್ದರಾಮಯ್ಯ ಆಹ್ವಾನ ನೀಡುವ ಕುರಿತು ಮಾತನಾಡಿದ ಸಿಎಂ, ವಿಧಾನಸಭೆಗಿಂತ ದೊಡ್ಡ ವೇದಿಕೆ ಯಾವುದಿದೆ ಹೇಳಿ?, 15 ದಿನ ಸದನ ನಡೆಯಿತು. ವೇದಿಕೆ ಇದ್ದಾಗ ಅಲ್ಲಿ ಚರ್ಚೆ ಮಾಡಲ್ಲ, ಹೊರಗೆ ರಾಜಕೀಯವಾಗಿ ಹೇಳಿಕೆ ನೀಡುತ್ತಾರೆ. ಸದನಕ್ಕಿಂತ ಪವಿತ್ರ ವೇದಿಕೆ ಬೇಕಾ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಈ ಸರ್ಕಾರದಲ್ಲಿ ಉ.ಕ ಭಾಗದ ಸಮಸ್ಯೆಗಳ ಚರ್ಚೆಗೆ ಅವಕಾಶ ಸಿಗಲಿಲ್ಲ: ಸಿದ್ದರಾಮಯ್ಯ ಆಕ್ರೋಶ
400 ಬೆಡ್ಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆಗುತ್ತಿರುವುದು ರಾಜ್ಯದಲ್ಲಿ ಇದೇ ಮೊದಲ ಸಲ ಆಗಿದೆ. ಜಿಂದಾಲ್ ಸಹಯೋಗದೊಂದಿಗೆ ಕಾಮಗಾರಿ ನಡೆಯಲಿದೆ. ಉಪಕರಣಗಳಿಗೆ ಸರ್ಕಾರ ಅನುದಾನ ನೀಡಲಿದೆ. ದೇಶದಲ್ಲಿ ಪೌಷ್ಟಿಕ ಆಹಾರದ ಕೊರತೆಯ ಸಮಸ್ಯೆ ಇದೆ. ಕಲ್ಯಾಣ ಕರ್ನಾಟಕದಲ್ಲಿ ಅಪೌಷ್ಟಿಕತೆ ನಿವಾರಣೆಗೆ ವಿಶೇಷ ಅನುದಾನ ನೀಡಿ, ಆರೋಗ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದೇವೆ. ಜಿಂದಾಲ್ ಕಂಪನಿಗೆ ಹೆಚ್ಚು ಶಕ್ತಿ ಇದ್ದು, ಅವಳಿ ಜಿಲ್ಲೆಗಳಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಕೊಡುಗೆ ನೀಡಬೇಕು.
ಸಿಎಂಗೆ ಸನ್ಮಾನದ ವೇಳೆ ವಿಮ್ಸ್ ನಿರ್ದೇಶಕ ಖಡ್ಗ ನೀಡಿದರು. ಈ ವೇಳೆ ಪ್ರೀತಿಯಿಂದ ಖಡ್ಗ, ಗದೆ ನೀಡಿದರೆ ನಾನು ಸ್ವೀಕರಿಸುವುದಿಲ್ಲ, ಗದೆಯನ್ನು ಊರಿನ ಹನುಮಪ್ಪನಿಗೆ ಹಾಗೂ ಖಡ್ಗವನ್ನು ದುರ್ಗಮ್ಮನಿಗೆ ನೀಡುವೆ ಎಂದು ಕೊಟ್ಟ ಖಡ್ಗವನ್ನು ವಾಪಸ್ ನೀಡಿದರು.
ಇದನ್ನೂ ಓದಿ: ಬೊಮ್ಮಾಯಿ ರಾಜ್ಯ ಕಂಡ ಅತ್ಯಂತ ವೀಕೆಸ್ಟ್ ಮುಖ್ಯಮಂತ್ರಿ: ಸಿದ್ದರಾಮಯ್ಯ
ಸಿಎಂ ವಿರುದ್ಧ ಸಿದ್ದು ವಾಗ್ದಾಳಿ: ಹಗರಿಬೊಮ್ಮನಹಳ್ಳಿ ಪಟ್ಟಣದ ಜಿ.ಬಿ. ಕಾಲೇಜು ಮೈದಾನದಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಮಾಲವಿ ಜಲಾಶಯದ ವಿಜಯೋತ್ಸವ ಹಾಗೂ ಸಾರ್ಥಕ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ನವರು ದಮ್ಮು, ತಾಕತ್ತಿನ ಬಗ್ಗೆ ಮಾತನಾಡುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ ಎದುರು ನಾಯಿ ಮರಿ ತರ ಮಾಡುತ್ತಾರೆ. ಗಡಗಡ ಎಂದು ನಡುಗುತ್ತಾರೆ ಅಂತಾ ಹೇಳಿದ್ದರು. ಇದಕ್ಕೆ ಸಿಎಂ ಖಾರವಾಗಿಯೇ ಟಾಂಗ್ ನೀಡಿದ್ದಾರೆ.