ಬಳ್ಳಾರಿ: ತುಂಗಭದ್ರಾ ಜಲಾಶಯಕ್ಕೆ ದಾಖಲೆ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಕಳೆದ 4-5 ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನೀರು ಸಂಗ್ರಹವಾಗಿದ್ದು, ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಜಲಾಶಯದ ಒಳಹರಿವಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅವಧಿಗೆ ಮುನ್ನವೇ ಜಲಾಶಯ ಭರ್ತಿಯಾಗುವ ಸಾಧ್ಯತೆಯಿದೆ. ಹೀಗಾಗಿ ಭತ್ತ ನಾಟಿಗೆ ಜಲಾಶಯದ ಅಚ್ಚುಕಟ್ಟು ಭಾಗದ ರೈತರು ಸಿದ್ಧತೆ ನಡೆಸಿದ್ದಾರೆ.
ಕರ್ನಾಟಕ ಹಾಗೂ ಆಂಧ್ರ ಪ್ರದೇಶದ ಕೆಲ ಜಿಲ್ಲೆಗಳ ರೈತರ ಪಾಲಿಗೆ ಈ ಜಲಾಶಯ ಜೀವನಾಡಿ. ಜಲಾಶಯದ ನೀರನ್ನೇ ಅವಲಂಬಿಸಿ ಅಚ್ಚುಕಟ್ಟು ಭಾಗದ ರೈತರು ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುತ್ತಾರೆ. ಕಳೆದ ವರ್ಷ ಕೂಡ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾದ ಕಾರಣ ಮಳೆಗಾಲ ಮತ್ತು ಬೇಸಿಗೆ ಬೆಳೆಗೆ ಎರಡು ಅವಧಿಯಲ್ಲೂ ನೀರು ಲಭ್ಯವಾಗಿತ್ತು. ಈ ವರ್ಷ ಬೇಸಿಗೆ ಕಾಲದಲ್ಲೂ ಕೂಡ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರಲಿಲ್ಲ. ಈ ವರ್ಷವೂ ಶಿವಮೊಗ್ಗ, ಚಿಕ್ಕಮಗಳೂರು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯಕ್ಕೆ 20 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗಿದೆ.
ಸದ್ಯ ಜಲಾಶಯದಲ್ಲಿ 44 ಟಿಎಂಸಿ ನೀರು ಸಂಗ್ರಹವಾಗಿದೆ. ಅವಧಿಗೆ ಮುನ್ನವೇ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ. ನೀರಾವರಿ ಸಲಹಾ ಸಮಿತಿ ಕೂಡ ಇದೇ ತಿಂಗಳ 15 ರಂದು ಜಲಾಶಯದ ಎಲ್ಲಾ ಕಾಲುವೆಗಳಿಗೆ ನೀರು ಬಿಡಲು ತೀರ್ಮಾನ ಮಾಡಲಾಗಿದೆ. ರೈತರು ಕೂಡ ಭತ್ತ ನಾಟಿ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ 3 ದಿನ ಮಳೆ ಅಬ್ಬರ.. ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಮುನ್ನೆಚ್ಚರಿಕೆ
ಪ್ರತಿ ವರ್ಷ ಸಸಿಗಳನ್ನು ಖರೀದಿ ಮಾಡಿ ಭತ್ತ ನಾಟಿ ಮಾಡುತ್ತಿದ್ದರು. ಆದರೆ ಹೆಚ್ಚಿನ ರೈತರು ಸಸಿ ಮಡಿಗಳನ್ನು ಸ್ವಂತವಾಗಿ ಹಾಕಿಕೊಂಡಿದ್ದಾರೆ. ಕಾಲುವೆಗಳಿಗೆ ನೀರು ಬೇಗ ಬಿಡುವುದರಿಂದ ರೈತರಿಗೆ ಬಹಳ ಅನುಕೂಲವಾಗುತ್ತದೆ. ಜೊತೆಗೆ ಸಸಿಯನ್ನು ಖರೀದಿ ಮಾಡುವುದು ತಪ್ಪುತ್ತದೆ ಅಂತಿದ್ದಾರೆ ಭತ್ತ ಬೆಳೆಗಾರರು.