ಬೆಳಗಾವಿ: ಉತ್ತರ ಪ್ರದೇಶದಿಂದ ಕೆಲಸ ಅರಸಿ ಬಂದ ಕಾರ್ಮಿಕರಿಗೆ ಊಟ ನೀಡದೆ ಗುತ್ತಿಗೆದಾರರು ನಡು ನೀರಿನಲ್ಲಿಯೇ ಕೈಬಿಟ್ಟಿದ್ದಾರೆ. ಇದರಿಂದ ನಾಲ್ಕು ದಿನಗಳಿಂದ ಉಪವಾಸ ಇರುವ ಕಾರ್ಮಿಕರು ತಮಗೆ ಊಟ ನೀಡುವಂತೆ ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ.
ತಾಲೂಕಿನ ಕಮಕಾರಟ್ಟಿ ಗ್ರಾಮದಲ್ಲಿ ನಾಲ್ಕು ದಿನದಿಂದ ಉಪವಾಸವಿರುವ ಕಾರ್ಮಿಕರು ಉತ್ತರ ಪ್ರದೇಶದಿಂದ ಹೊಟ್ಟೆಪಾಡಿಗಾಗಿ ಕೆಲಸ ಅರಸಿ ಬೆಳಗಾವಿಗೆ ಬಂದಿದ್ದರು. ಕಟ್ಟಡ ಕಾರ್ಮಿಕ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ, ದೇಶಾದ್ಯಂತ ಲಾಕ್ಡೌನ್ ಹಿನ್ನೆಲೆ ಹೋಟೆಲ್ ಸೇರಿದಂತೆ ಎಲ್ಲವೂ ಬಂದ್ ಆಗಿದೆ. ಇದು ಈ ಕಾರ್ಮಿಕರನ್ನ ಸಂಕಷ್ಟಕ್ಕೆ ದೂಡಿದೆ.
ಲಾಕ್ಡೌನ್ನಿಂದಾಗಿ ತಮ್ಮ ಬಳಿ ಇದ್ದ ಹಣವೂ ಖಾಲಿಯಾಗಿದೆ. ಅಡುಗೆ ಮಾಡಲು ಸಾಮಗ್ರಿಗಳು ಕೂಡ ಇಲ್ಲದೇ ಉಪವಾಸ ಇದ್ದೇವೆ ಎಂದು ಅಳಲು ತೋಡಿಕೋಂಡಿದ್ದು, ಈ ನಾಲ್ವರು ಕಾರ್ಮಿಕರು ನಮಗೆ ಆಹಾರ ಕೊಡಿಸಿ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.