ಚಿಕ್ಕೋಡಿ: ರಾಜಕೀಯ ಪ್ರತಿನಿಧಿಗಳು ರಾಜಕೀಯ ಲಾಭಕ್ಕಾಗಿ ರಾಯಣ್ಣನ ಹೆಸರು ಬಳಕೆ ಮಾಡುತ್ತಿದ್ದಾರೆ. ಹೀಗೆ ಮಾಡುವುದನ್ನು ಕೂಡಲೇ ಬಿಟ್ಟು ನಂದಗಡದ ರಾಯಣ್ಣ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕ ಮಾಡಬೇಕು ಎಂದು ಕರ್ನಾಟಕ ನವ ನಿರ್ಮಾಣ ಪಡೆ, ರಾಯಭಾಗ ಘಟಕದ ಅಧ್ಯಕ್ಷ ಅರುಣ ಠಕ್ಕಣ್ಣವರ ಆಗ್ರಹಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಭಾಗ ಪಟ್ಟಣದಲ್ಲಿ ಪ್ರತಿಭಟನೆ ಬಳಿಕ ರಾಯಭಾಗ ತಹಶೀಲ್ದಾರ್ ಎನ್ಬಿ ಗೆಜ್ಜಿ ಅವರಿಗೆ ನಂದಗಡದ ರಾಯಣ್ಣ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕ ಮಾಡಬೇಕೆಂದು ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ರಾಜಕೀಯ ಲಾಭಕ್ಕಾಗಿ ರಾಯಣ್ಣ ಬ್ರಿಗೇಡ್, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಸಚಿವ ಕೆ.ಎಸ್ ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಹೆಸರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ವಿನಃ ನಂದಗಡದಲ್ಲಿರುವ ರಾಯಣ್ಣನ ಸಮಾಧಿ ಅಭಿವೃದ್ಧಿಪಡಿಸಬೇಕೆನ್ನುವ ಇಚ್ಚಾಶಕ್ತಿ ಯಾರೊಬ್ಬರಿಗೂ ಇಲ್ಲ ಎಂದು ಆರೋಪಿಸಿದರು.
ಶೀಘ್ರದಲ್ಲಿ ಸಂಗೊಳ್ಳಿ ರಾಯಣ್ಣನ ಸಮಾಧಿ ಸ್ಮಾರಕ ನಂದಗಡದಲ್ಲಿ ಆಗದೇ ಹೋದರೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ನವ ನಿರ್ಮಾಣ ಪಡೆ ಪದಾಧಿಕಾರಿಗಳು ಎಚ್ಚರಿಕೆ ನೀಡಿದರು.