ಬೆಳಗಾವಿ: ವ್ಯಕ್ತಿಯೊಬ್ಬ ನೇಣು ಹಾಕಿಕೊಂಡು ಅನುಮಾನಾಸ್ಪದವಾಗಿ ಸಾವಿಗೀಡಾಗಿದ ಘಟನೆ ರಾಮದುರ್ಗ ತಾಲೂಕಿನ ತೋರನಗಟ್ಟಿ ಗ್ರಾಮದಲ್ಲಿ ನಡೆದಿದೆ.
ತೋರನಗಟ್ಟಿ ಗ್ರಾಮದ ಪ್ರಕಾಶ್ ಬಡಕಲೂರ (26) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ವ್ಯಕ್ತಿ. ಈತ ಅದೇ ಗ್ರಾಮದ ಬಸಪ್ಪ ವನೇಸಿ ಎಂಬುವರ ಹೊಲದಲ್ಲಿ ಕಳೆದ ಹತ್ತು ವರ್ಷಗಳಿಂದ ಲಾವಣಿ ಮಾಡಿಕೊಂಡು ಬಂದ ಹಣದಲ್ಲಿ ಜೀವನ ಸಾಗಿಸುತ್ತಿದ್ದರು. ಆದರೆ, ಕಳೆದ ಹತ್ತು ವರ್ಷಗಳಿಂದ ಬಂದ ಆದಾಯದಲ್ಲಿ ಇದುವರೆಗೆ ಪಾಲು ತೆಗೆದುಕೊಂಡಿರಲಿಲ್ಲ.
ಅದೀಗ ಅಂದಾಜು 10 ಲಕ್ಷಗಳಾಗಿದ್ದು, ಅದರಲ್ಲಿ ಈಗಾಗಲೇ ಎರಡು ಲಕ್ಷ ಹಣವನ್ನು ನೀಡಿದ್ದಾರೆ. ಇನ್ನುಳಿದ ಹಣ ಕೊಡುವಂತೆ ಒತ್ತಾಯಿಸಿದಾಗ ಬಸಪ್ಪ ಎಂಬುವವರೇ ಸಹೋದರ ಪ್ರಕಾಶನನ್ನು ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಮೃತನ ಸಹೋದರಿ ಹನುಮವ್ವ ಆರೋಪಿಸಿದ್ದಾರೆ.
ಇನ್ನು ಸಹೋದರಿ ಆರೋಪಿಸುತ್ತಿರುವ ಹೊಲದ ಮಾಲೀಕ ಬಸಪ್ಪನವರ ಹೊಲದಲ್ಲಿರುವ ಮನೆಯಲ್ಲಿಯೇ ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಪ್ರಕಾಶನ ಕಾಲುಗಳು ಕೂಡ ನೆಲಕ್ಕೆ ತಾಗುತ್ತಿವೆ. ಹೀಗಾಗಿ ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದ್ದು, ಪೊಲೀಸ್ ತನಿಖೆ ನಂತರವೇ ಸತ್ಯಾಸತ್ಯತೆ ತಿಳಿಯಲಿದೆ.