ಬೆಳಗಾವಿ : ಕೃಷ್ಣಾ ಮೇಲ್ದಂಡೆ ವಿಷಯದಲ್ಲಿ ಸುಪ್ರೀಂಕೋರ್ಟ್‍ನಲ್ಲಿ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ತೆಲಂಗಾಣ ಹಿಂಪಡೆದಿದೆ. ಕೃಷ್ಣಾ ಮೇಲ್ದಂಡೆ ನೀರು ರಾಜ್ಯದ ಪಾಲಿನ ಬಳಕೆಗೆ ಪೂರಕವಾದ ಅಧಿಸೂಚನೆ ಶೀಘ್ರವೇ ಹೊರ ಬೀಳುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸದನಕ್ಕೆ ತಿಳಿಸಿದರು.
ನೀರಾವರಿ ಯೋಜನೆ ಜಾರಿ ಸಂಬಂಧ ನಡೆದ ಚರ್ಚೆಗೆ ವಿಧಾನಸಭೆಗೆ ಉತ್ತರಿಸಿದ ಸಿಎಂ, ತೆಲಂಗಾಣ ತಾನು ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಹಿಂಪಡೆದಿದೆ. ಬಹುಶಃ ಮುಂದಿನ ತಿಂಗಳ ವೇಳೆಗೆ ಕರ್ನಾಟಕದ ಪರ ತೀರ್ಪು ಬರಬಹುದು ಎಂಬ ಪರೋಕ್ಷ ಸೂಚನೆ ನೀಡಿದರು.
ಈ ವಿವಾದದ ಕುರಿತು ಎಷ್ಟು ಮಾತನಾಡಬೇಕು, ಎಷ್ಟು ಮಾತನಾಡಬಾರದು ಎಂಬುದು ನನಗೆ ಗೊತ್ತಿದೆ. ಏಕೆಂದರೆ, ಈ ಅಂತಾರಾಜ್ಯ ನದಿ ವಿವಾದದ ಬಗ್ಗೆ ಸದನಕ್ಕೆ ನೀಡಬೇಕಾದ ಮಾಹಿತಿ ಎಷ್ಟು ಎಂಬುದರ ಹೊಣೆಗಾರಿಕೆ ನನ್ನ ಮೇಲಿದೆ. ಆದರೆ, ಇಷ್ಟನ್ನು ಮಾತ್ರ ಹೇಳಬಲ್ಲೆ. ನಾನೇ ವಕೀಲರೊಂದಿಗೆ ಸಂಪರ್ಕದಲ್ಲಿರುವೆ. ಕೇಂದ್ರ ಸರ್ಕಾರ ತನ್ನ ನಿಲುವು ತಿಳಿಸುತ್ತಿದ್ದಂತೆ ಅಧಿಸೂಚನೆ ಹೊರ ಬೀಳಲಿದೆ. ಇದು ಆದಷ್ಟು ಶೀಘ್ರ ಆಗಲಿದೆ ಎಂದಷ್ಟೇ ಹೇಳುವೆ ಎಂದರು.
ನಾನು ಮುಖ್ಯಮಂತ್ರಿಯಾದ ನಂತರ ಸುಪ್ರೀಂಕೊರ್ಟ್ ಈ ಅರ್ಜಿಯನ್ನು ವೇಗವಾಗಿ ಕೈಗೆತ್ತಿಕೊಂಡು ಕೇಂದ್ರಕ್ಕೆ ತನ್ನ ನಿಲುವು ತಿಳಿಸುವಂತೆ ಆದೇಶಿಸಿದೆ. ಮುಂದಿನ ತಿಂಗಳು ವಿಚಾರಣೆ ನಿಗದಿಯಾಗಿದ್ದು, ಕೇಂದ್ರದ ನಿಲುವು ಸ್ಪಷ್ಟವಾಗಲಿದೆ. ತೆಲಂಗಾಣದಿಂದ ಎದುರಾಗಿದ್ದ ಅಡ್ಡಿ ದೂರವಾಗಿದೆ ಎಂಬುದನ್ನು ಮಾತ್ರ ನಾನು ಸದನಕ್ಕೆ ತಿಳಿಸಬಯಸುತ್ತೇನೆ.
ಮಹದಾಯಿಯ ವಿಷಯವೂ ಕೂಡ ಕೆಲವೇ ಕೆಲವು ದಿನಗಳಲ್ಲಿ ಬಗೆಹರಿಯಲಿದೆ. ಈ ವಿಷಯವಾಗಿ ಕೋರ್ಟಿನಲ್ಲಿರುವ ತಕರಾರು ಅರ್ಜಿಯ ವಿಚಾರಣಾ ಪ್ರಗತಿಯನ್ನು ಖುದ್ದಾಗಿ ಪರಿಶೀಲಿಸುತ್ತಿದ್ದು, ಶೀಘ್ರ ಮಹದಾಯಿ ನೀರಿನ ಪ್ರಯೋಜನ ರಾಜ್ಯಕ್ಕೆ ದೊರೆಯಲಿದೆ ಎಂದು ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಕೈ ನಾಯಕರ ಕಾಲೆಳೆದ ಹೆಚ್‍ಡಿಕೆ : ಇದಕ್ಕೂ ಮುನ್ನ ಉ-ಕ ಭಾಗದ ನೀರಾವರಿ ಯೋಜನೆ ಪ್ರಗತಿಯ ಬಗ್ಗೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಮಹದಾಯಿ ನೀರನ್ನು ನ್ಯಾಯಾಧೀಕರಣ ನಮಗೆ ಹಂಚಿಕೆ ಮಾಡಿದೆ. ಆದರೆ, ಇದರಲ್ಲಿ ಕೇಂದ್ರ ಜಲ ಆಯೋಗ ಕಳಸಾದಿಂದ ಇಷ್ಟು ಹಾಗೂ ಬಂಡೂರಿ ನಾಲಾದಿಂದ ಇಂತಿಷ್ಟು ಎಂಬ ಹಂಚಿಕೆ ಮಾಡಿದೆ. ಈ ರೀತಿ ನೀರನ್ನು ವಿಂಗಡಿಸಲು ಕೇಂದ್ರ ಜಲ ಆಯೋಗ ಯಾರು ಎಂದು ಕಟುವಾಗಿ ಪ್ರಶ್ನಿಸಿದರು.
ಈ ವಿಷಯವಾಗಿ ನಿಮ್ಮದೇ ಪಕ್ಷದ ಸರ್ಕಾರವಿರುವ ಕೇಂದ್ರದ ಗಮನಕ್ಕೆ ತಂದು ನಮಗಾದ ಅನ್ಯಾಯವನ್ನು ಸರಿಪಡಿಸಿಕೊಳ್ಳಿ. ಭದ್ರಾ ಮೇಲ್ದಂಡೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡಬೇಕೆಂಬುದು ಪುನಃ ನನೆಗುದಿಗೆ ಬಿದ್ದಿದೆ ಎಂಬುದು ನನ್ನ ಮಾಹಿತಿ. ಆದ್ದರಿಂದ ಕೂಡಲೇ ಕೇಂದ್ರದ ಮೇಲೆ ಪ್ರಭಾವ ಬೀರಿ ಇದರ ಅಧಿಸೂಚನೆಯನ್ನು ಜಾರಿ ಮಾಡಿಸಿ ಎಂದು ಸಿಎಂ ಬೊಮ್ಮಾಯಿ ಅವರನ್ನು ಆಗ್ರಹಿಸಿದರು.
ಪಾಪ. ಮೇಕೆದಾಟು ವಿಷಯದಲ್ಲಿ ಕಾಂಗ್ರೆಸ್‍ನವರು ಚುನಾವಣಾ ಹಿನ್ನೆಲೆಯಲ್ಲಿ ಪಾದಯಾತ್ರೆ ಮಾಡ ಹೊರಟಿದ್ದಾರೆ. ಆಗ ಕೃಷ್ಣಾ ಕಡೆಗೆ ಈ ಪಕ್ಷದ ನಡೆ.. ಈಗ ಮೇಕೆದಾಟು ಕಡೆಗೆ. ಎತ್ತಿನಹೊಳೆಯನ್ನು ಎರಡು ವರ್ಷದಲ್ಲಿ ಮಾಡಿಸುವುದಾಗಿ ಕಾಂಗ್ರೆಸ್‍ನವರು ಹೇಳಿದ್ದರು. ಅದೂ ಆಗಲಿಲ್ಲ ಎಂದು ಹೆಚ್‍ಡಿಕೆ ಕೈ ನಾಯಕರ ಕಾಲೆಳೆದರು.
ಮತಾಂತರ ನಿಷೇಧ ವಿಧೇಯಕ ಚರ್ಚೆಗೆ ನಾಳೆ ಸಮಯ ನಿಗದಿ : ವಿಧಾನಸಭೆ ಸರ್ವಸದಸ್ಯರ ಸಹಮತದ ಮೇರೆಗೆ ಮತಾಂತರ ನಿಷೇಧ ವಿಧೇಯಕದ ಬಗ್ಗೆ ಚರ್ಚೆಯನ್ನು ನಾಳೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1ರವರೆಗೆ ನಡೆಸಲು ಸಮಯ ನಿಗದಿ ಮಾಡಲಾಯಿತು.
ಭೋಜನ ವಿರಾಮದ ನಂತರ ಸದನ ಆರಂಭ ಆಗುತ್ತಿದ್ದಂತೆ ಮಾತನಾಡಿದ ಸ್ಪೀಕರ್,ಮಧ್ಯಾಹ್ನ 3.30ರಿಂದ ಸಂಜೆ 5ರವರೆಗೆ ಉಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ, ನಾಳೆಗೆ ಮುಂದೂಡೋಣ. ಸಂಜೆ 5 ರಿಂದ 6ರವರೆಗೆ ಮತಾಂತರ ನಿಷೇಧ ವಿಧೇಯಕದ ಬಗ್ಗೆ ಚರ್ಚಿಸಿ, ನಾಳೆಯೂ ಮುಂದೂಡೋಣ ಎಂದರು. ಪ್ರತಿಪಕ್ಷ ಸದಸ್ಯರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಏಕಕಾಲಕ್ಕೆ ಎರಡು ವಿಷಯಗಳ ಬಗ್ಗೆ ಚರ್ಚೆ ಸರಿ ಆಗುವುದಿಲ್ಲ. ನಾನು ಸಿಎಂ ಆಗಿದ್ದಾಗ ಅಧಿವೇಶನವನ್ನು ವಿಸ್ತರಿಸಿದ್ದೇನೆ. ಇದಕ್ಕೆ ನಾನು ಹಲವು ಉದಾಹರಣೆ ಕೊಡಬಲ್ಲೆ. ಇನ್ನೂ ಉಕ ಭಾಗದ ಚರ್ಚೆ ಆಗಿಲ್ಲ. ಅಧಿವೇಶನ ಇನ್ನೂ ಎರಡ್ಮೂರು ದಿನಗಳ ಕಾಲ ವಿಸ್ತರಣೆ ಮಾಡಬೇಕು. ವಿಧೇಯಕದ ಬಗ್ಗೆ ಚರ್ಚೆಗೆ ನಮಗೆ ಹೆಚ್ಚಿನ ಸಮಯ ಬೇಕು ಎಂದು ಆಗ್ರಹಿಸಿದರು.
ಏನಪ್ಪಾ ಯಜಮಾನ, ಪ್ರತಿಪಕ್ಷದಲ್ಲಿದ್ದಾಗಲೇ ನೀನು ಸರಿ ಇದ್ದೆ. ಮಂತ್ರಿ ಆದ ಮೇಲೆ ಬಹಳಷ್ಟು ಬದಲಾಗಿದ್ದೀಯಾ? ನಮ್ಮ ಪ್ರಶ್ನೆಗೆ ಉತ್ತರಿಸಪ್ಪ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಅವರನ್ನು ಕುಟುಕಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಜೆ.ಸಿ ಮಾಧುಸ್ವಾಮಿ, ನಾಳೆ ಮಧ್ಯಾಹ್ನದ ಒಳಗೆ ವಿಧೇಯಕದ ಚರ್ಚೆ ಆಗಬೇಕು. ನಾಡಿದ್ದು ಪರಿಷತ್ತಿನಲ್ಲಿ ವಿಧೇಯಕ ಮಂಡಿಸಬೇಕಿದೆ. ಹೀಗಾಗಿ, ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಚರ್ಚೆ ನಡೆಯಲಿದೆ.
ಸರ್ಕಾರದ ಉತ್ತರವೂ ದೊರೆಯಲಿದೆ ಎಂದರು. ಎಲ್ಲ ಸದಸ್ಯರ ಸಲಹೆ ಪಡೆದ ಸ್ಪೀಕರ್, ನಾಳೆ ಬೆಳಗ್ಗೆ 10ಕ್ಕೆ ಸಭೆ ಆರಂಭಿಸಿ, ವಿಧೇಯಕದ ಬಗ್ಗೆ ಚರ್ಚೆ ನಡೆಸೋಣ. ಮಧ್ಯಾಹ್ನ ಉತ್ತರ ಕರ್ನಾಟಕ ಹಾಗೂ ಸಂಜೆ ಪ್ರಶ್ನೋತ್ತರ ಅವಧಿ ಇಟ್ಟುಕೊಳ್ಳೋಣ ಎಂದರು.
ಇದನ್ನೂ ಓದಿ: ನಗರ ಪಾಲಿಕೆ ಹಾಗೂ ಕೆಲ ಇತರ ಕಾನೂನು ತಿದ್ದುಪಡಿ ವಿಧೇಯಕ ಪರಿಷತ್ನಲ್ಲಿ ಅನುಮೋದನೆ