ಬೆಳಗಾವಿ: ಕಳೆದೊಂದು ವರ್ಷದಿಂದ ಕಾಂಗ್ರೆಸ್ ನಾಯಕರು, ಜಾರಕಿಹೊಳಿ ಅವರನ್ನು ತುಳಿಯುವ ಯತ್ನ ಮಾಡಿದರು. ಅವರಿಗೆ ಮೈತ್ರಿ ಸರ್ಕಾರದಲ್ಲಿ ಮಂತ್ರಿಗಿರಿ ಕೊಟ್ಟರೂ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡಲಿಲ್ಲ. ರಾಜ್ಯ-ರಾಷ್ಟ್ರ ನಾಯಕರ ವರ್ತನೆಗೆ ಬೇಸತ್ತಿದ್ದ ಅವರು, ಮೈತ್ರಿ ಸರ್ಕಾರ ಕಿತ್ತೆಸೆಯಲು ನಿರ್ಧರಿಸಿ ಅದ್ದನ್ನೀಗ ಸಾಧಿಸಿದ್ದಾರೆ. ಈ ವೇಳೆ ರಮೇಶ್ ಮನೆ, ಕ್ಷೇತ್ರ ಬಿಟ್ಟು ಹಲವು ದಿನ ಹೊರಗಡೆ ಉಳಿಯಬೇಕಾಯಿತು. ಅವರೊಂದಿಗೆ ಎಲ್ಲಾ ಶಾಸಕರು ರಾಜೀನಾಮೆ ನೀಡಿ ಮೈತ್ರಿ ಸರ್ಕಾರ ಉರುಳಿಸಿ ಪಾಠ ಕಲಿಸಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಬೆಂಬಲಿಗರಾದ ಪ್ರಕಾಶ ಕರನಿಂಗ್ ಹೇಳಿದ್ದಾರೆ.
ಗೋಕಾಕ ವಿಧಾನಸಭೆ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಸಭೆ ನಡೆಸಿದ ಬೆಂಬಲಿಗರು, ಬರುವ ಚುನಾವಣೆಯಲ್ಲಿ ರಮೇಶ್ ಅವರನ್ನು ಬೆಂಬಲಿಸುವಂತೆ ಮತದಾರರಲ್ಲಿ ಕೋರಿದರು. ತಾಲೂಕಿನ ಕೊಣ್ಣೂರು, ಶಿವಾಪುರ, ಮೆಕಲಮರಡಿ ಗ್ರಾಮಗಳಲ್ಲಿ ಬೆಂಬಲಿಗರು ಭರ್ಜರಿ ಮತಬೇಟೆ ಆರಂಭಿಸಿದ್ದು, ಜಾರಕಿಹೊಳಿ ಬೆಂಬಲಿಗರಾದ ಪ್ರಕಾಶ ಕರನಿಂಗ್, ಹನುಮಂತ ದುರಗಣ್ಣವರ, ಸುರೇಶ ಸನದಿ ನೇತೃತ್ವದಲ್ಲಿ ವಿವಿಧ ಗ್ರಾಮಗಳಲ್ಲಿ ಪ್ರತ್ಯೇಕ ಸಭೆ ನಡೆಸಲಾಯಿತು.
ಆದರೆ ಹಿಂದಿನ ಸ್ಪೀಕರ್ ದುರುದ್ದೇಶದಿಂದ ಎಲ್ಲಾ ಶಾಸಕರನ್ನು ಅನರ್ಹ ಮಾಡಿದ್ದಾರೆ. ಕೊಣ್ಣುರು ಗ್ರಾಮದ ದೇವಾನು ದೇವತೆಗಳ ಆಶೀರ್ವಾದದಿಂದ ರಮೇಶ್ಗೆ ಜಯ ಸಿಗಲಿದೆ. ಡಿಸೆಂಬರ್ 5ರಂದು ಉಪ ಚುನಾವಣೆ ಇದ್ದು, ರಮೇಶರನ್ನು ಗೆಲ್ಲಿಸೋಣ. ಬಳಿಕ ಅವರು ಉಪ ಮುಖ್ಯಮಂತ್ರಿ ಆಗಲಿದ್ದಾರೆ. ಬೇರೆಯವರು ಬಂದು ತಲೆಕೆಡಿಸಿದರೂ ಯಾರೂ ಬದಲಾಗಬಾರದು. ಯಾರ ಆಮಿಷಗಳಿಗೆ ಮಾರು ಹೋಗದಂತೆ ಕೋರಿದರು.