ಅಥಣಿ/ಬೆಳಗಾವಿ : ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದೆ. ಇಂದು ಅಥಣಿಯಲ್ಲಿ ಕೆಲವು ರೈತ ಸಂಘಟನೆಗಳು ಹೆದ್ದಾರಿ ತಡೆದು ಹೋರಾಟ ನಡೆಸಿದವು.
ಅಥಣಿ ತಾಲೂಕಿನ ಐಗಳಿ ಕ್ರಾಸ್ ಬಳಿ ಸಂಕೇಶ್ವರ-ಜೇವರ್ಗಿ ರಾಜ್ಯ ಹೆದ್ದಾರಿಯನ್ನು ತಡೆ ಹಿಡಿದು, ರೈತ ಮುಖಂಡ ಪ್ರಕಾಶ್ ಪೂಜಾರಿ ನೇತೃತ್ವದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಯಿತು.
ಇದೇ ವೇಳೆ ಪ್ರಕಾಶ್ ಪೂಜಾರಿ ಮಾತನಾಡಿ, ನೂತನ ಕೃಷಿ ಕಾಯ್ದೆಯನ್ನು ಹಿಂಪಡೆಯಲು ಕಳೆದ ಆರು ತಿಂಗಳಿಂದ ಕೇಂದ್ರ ಸರ್ಕಾರಕ್ಕೆ ಮನವಿ ಮೇಲೆ ಮನವಿ ಸಲ್ಲಿಸುತ್ತಿದ್ದೇವೆ. ಇಂದು ದೇಶಾದ್ಯಂತ ರೈತ ಸಮೂಹ ನೀಡಿರುವ ಹೋರಾಟ ಯಶಸ್ವಿಯಾಗಿದೆ. ರೈತರು ಶಾಂತಿಯುತ ಹೋರಾಟಕ್ಕೆ ಸರ್ಕಾರಗಳು ಅವಕಾಶ ಕಲ್ಪಿಸಬೇಕೆಂದು ಹೇಳಿದರು.
ಕೇಂದ್ರ ಸರ್ಕಾರ ತಕ್ಷಣವೇ ಎಚ್ಚೆತ್ತು, ಹೊಸ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು. ಇಲ್ಲವಾದ್ರೆ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಪ್ರತಿ ತಾಲೂಕಿನಲ್ಲಿ ನಡೆಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.