ಬೆಳಗಾವಿ: ನನ್ನ ನೋಡಿ ಅಸಹ್ಯಪಟ್ಟ ಸಮಾಜವೇ ಇಂದು ಸನ್ಮಾನಿಸಿ ಗೌರವಿಸುತ್ತಿದೆ ಎಂದು ಜಾನಪದ ಅಕಾಡೆಮಿ ಅಧ್ಯಕ್ಷೆ, ಪದ್ಮಶ್ರೀ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿ ಹೇಳಿದ್ದಾರೆ.
ನಗರದ ಕೆಎಲ್‌ಇ ಸಂಸ್ಥೆಯ ಜೀರಿಗೆ ಸಭಾಂಗಣದಲ್ಲಿ ಸಂಸ್ಥೆಯ ಸ್ತ್ರೀ ಶಕ್ತಿ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹುಡುಗನಾಗಿ ಹುಟ್ಟಿ, ಬೆಳೆಯುತ್ತಾ ತೃತೀಯ ಲಿಂಗಿಯಾಗಿ ಬೆಳೆದಿದ್ದರಿಂದ ಬಾಲ್ಯದಿಂದಲೇ ಸಾಕಷ್ಟು ನೋವುಗಳನ್ನು ಅನುಭವಿಸಿ, ಎರಡು ಸಲ ಆತ್ಮಹತ್ಯೆಗೆ ಯತ್ನಿಸಿ ಬಳಿಕ ಈ ಸಮಾಜವನ್ನು ಎದುರಿಸಿ ಬೆಳೆಯಬೇಕು ಎಂಬ ಸಂಕಲ್ಪ ತೊಟ್ಟಿದ್ದರಿಂದ ನಿಮ್ಮೆಲ್ಲರ ಮುಂದೆ ನಿಂತು ಮಾತನಾಡುತ್ತಿದ್ದೇನೆ ಎಂದರು.
ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ಮಹಿಳೆಯರು ಅತ್ಯಂತ ಕಷ್ಟಮಯ ಜೀವನ ಸಾಗಿಸುತ್ತಾರೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಲಿಂಗ ತಾರತಮ್ಯವೂ ಅಧಿಕಗೊಳ್ಳುತ್ತಿದೆ. ಹೆಣ್ಣು ಮಗು ಜನಿಸಿದರೆ ಅಯ್ಯೋ ಎನ್ನುವವರೇ ಬಹಳಷ್ಟು ಜನರಿದ್ದಾರೆ. ಆದರೆ ಅದೇ ಹೆಣ್ಣು ಮನೆಯ ಬೆಳಕು ಎಂಬುದನ್ನು ಅರಿತುಕೊಳ್ಳಬೇಕು. ನನ್ನಲ್ಲಿದ್ದ ಜಾನಪದ ಕಲೆಯನ್ನು ಮುಚ್ಚಿಡದೆ ಸಮಾಜಕ್ಕೆ ಅರ್ಪಿಸುತ್ತ, ಸಮಾಜದಲ್ಲಿರುವ ಅಂಕು-ಡೊಂಕು ತಿದ್ದಲು ಉಪಯೋಗಿಸಿಕೊಂಡೆ. ಸಮಾಜ ನನ್ನನ್ನು ನೋಡುವ ದೃಷ್ಟಿಯೇ ಬೇರೆಯಿತ್ತು. ಆದರೆ ನಾನು ಯಾವುದಕ್ಕೂ ಎದೆಗುಂದದೆ ಮುನ್ನಡೆದು ಯಶಸ್ಸು ಕಂಡೆ. ಬಳಿಕ ಜಾನಪದ ಹಾಗೂ ಕುಣಿತ ಕಲೆಯನ್ನೇ ತೃತೀಯ ಲಿಂಗಿಗಳಿಗೆ ತರಬೇತಿ ನೀಡಿದೆ. ಅವರು ಯಾರ ಹಂಗಿಗೂ ಒಳಗಾಗದೆ ಒಳ್ಳೆಯ ಜೀವನ ನಡೆಸುವಂತಹ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.