ಬೆಳಗಾವಿ: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್ ಶರ್ಮಾ ಅವರ ಅಣಕು ಪ್ರತಿಕೃತಿಯನ್ನು ನಡುರಸ್ತೆಯಲ್ಲೇ ಗಲ್ಲಿಗೇರಿಸಿದ ಘಟನೆ ಬೆಳಗಾವಿಯ ಪೋರ್ಟ್ ರಸ್ತೆಯಲ್ಲಿ ನಡೆದಿದೆ. ಕೆಲ ಕಿಡಿಗೇಡಿಗಳು ಪ್ರತಿಕೃತಿಯನ್ನು ನಡುರಸ್ತೆಯಲ್ಲೇ ಗಲ್ಲಿಗೇರಿಸಿದ ರೀತಿಯಲ್ಲಿ ನೇತು ಹಾಕಿದ್ದರು. ಇದರಿಂದ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ನೂಪುರ್ ಶರ್ಮಾ ಅವರ ಭಾವಚಿತ್ರದ ಸಮೇತ ಅವರ ಪ್ರತಿಕೃತಿ ನಗರದ ಫೋರ್ಟ್ ರಸ್ತೆಯಲ್ಲಿ ಹಗ್ಗ ಕಟ್ಟಿ ಗುರುವಾರ ತಡರಾತ್ರಿ ನೇತುಹಾಕಿದ್ದರು. ಶುಕ್ರವಾರ ಬೆಳಗ್ಗೆ ಇದನ್ನು ಕಂಡು ಹಿಂದೂ ಜಾಗರಣ, ಶ್ರೀರಾಮ ಸೇನೆ, ಕೆಲ ಪಾಲಿಕೆ ಸದಸ್ಯರು ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿ ಹೆಚ್ಚು ಜನ ಜಮಾಯಿಸಿದ್ದರಿಂದ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಈ ಪ್ರತಿಕೃತಿಯನ್ನು ತಕ್ಷಣ ತೆರವುಗೊಳಿಸಬೇಕು, ಇಲ್ಲದಿದ್ದರೆ ನಾವೇ ಅದನ್ನು ತೆರವು ಮಾಡಬೇಕಾಗುತ್ತದೆ. ಹೊಸ ವಿವಾದಕ್ಕೆ ಅವಕಾಶ ಕೊಡಬಾರದು ಎಂದು ಕೆಲ ಮುಖಂಡರು ಆಗ್ರಹಿಸಿದರು.
ಇದನ್ನೂ ಓದಿ: ನೂಪುರ್ ಶರ್ಮಾ, ಓವೈಸಿ, ಸ್ವಾಮಿ ಯತಿ ನರಸಿಂಹಾನಂದ ಸೇರಿ 10 ಮಂದಿ ವಿರುದ್ಧ ಪ್ರಕರಣ
ಇದು ಪ್ರಜಾಪ್ರಭುತ್ವ ದೇಶ, ತಾಲಿಬಾನ್ ಅಲ್ಲ. ಇಲ್ಲಿ ನಡುರಸ್ತೆಯಲ್ಲಿ ಗಲ್ಲಿಗೇರಿಸುವ ಪದ್ಧತಿ ಇಲ್ಲ. ಗಲ್ಲಿಗೇರಿಸುವ ಶಿಕ್ಷೆ ನೀಡುವ ಅಧಿಕಾರ ಇರುವುದು ನ್ಯಾಯಾಂಗಕ್ಕೆ ಮಾತ್ರ. ಅದರ ಅಣಕು ಮಾಡುವುದು ಸರಿಯಲ್ಲ. ನೂಪುರ್ ಶರ್ಮಾ ಅವರ ಹೇಳಿಕೆಯಲ್ಲಿ ತಪ್ಪಿದ್ದರೆ ಕಾನೂನು ಪ್ರಕಾರ ಕ್ರಮ ವಹಿಸಬೇಕು. ಕೇಸ್ ದಾಖಲಿಸಿ ಬಂಧಿಸಲಿ.
ಆದರೆ ಈ ರೀತಿ ಗಲ್ಲಿಗೇರಿಸುವ ಮೂಲಕ ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸುವ ಹುನ್ನಾರ ನಡೆದಿದೆ. ಇದನ್ನು ಸಹಿಸುವುದಿಲ್ಲ ಎಂದು ಮಹಾನಗರ ಪಾಲಿಕೆ ಸದಸ್ಯ ಶಂಕರ ಪಾಟೀಲ ಕಿಡಿಕಾರಿದರು. ನಂತರ ಸ್ಥಳಕ್ಕೆ ಧಾವಿಸಿದ ಮಾರ್ಕೆಟ್ ಠಾಣೆ ಪೊಲೀಸರು ಪ್ರತಿಕೃತಿ ತೆರವು ಮಾಡಿದರು.