ಬೆಳಗಾವಿ/ಬೆಂಗಳೂರು: ಕಾನೂನು ಎಲ್ಲರಿಗೂ ಒಂದೇ. ಶಾಸಕನಾದರೂ ಒಂದೇ, ಮಂತ್ರಿಗಳೂ ಒಂದೇ, ಪೊಲೀಸರು ನನ್ನನ್ನು ಬಂಧಿಸಲು ಬಂದರೆ ಅವರಿಗೆ ಸಹಕಾರ ಕೊಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ತಿಳಿಸಿದ್ದಾರೆ. ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತ ಮೇಲಿನ ಹಲ್ಲೆ ಆರೋಪಕ್ಕೆ ಪ್ರತಿಕ್ರಿಯಿಸುತ್ತಾ, ಅದರ ಬಗ್ಗೆ ತನಿಖೆ ಆಗಬೇಕು. ಆ ವ್ಯಕ್ತಿ ಸುಳ್ಳು ಹೇಳುತ್ತಿದ್ದಾನೆ. ಅದು ಸುಳ್ಳು ಆರೋಪ ಆಗಿದೆ. ನನ್ನ ಸಹಚರರು ಹೋಗಿದ್ದು ನಿಜ. ದಾಖಲೆ ಕೇಳಿದ್ದೂ ನಿಜ. ಆತ ದಾಖಲೆ ಕೊಡುವುದಾಗಿ ಕರೆಸಿದ್ದೂ ನಿಜ. ಆ ಸೀನ್ ಏಕೆ ಕ್ರಿಯೇಟ್ ಆಗಿದ್ದು. ನಾನು ತನಿಖೆಗೆ ಮನವಿ ಮಾಡುತ್ತೇನೆ. ಎಲ್ಲಾ ಸಹಕಾರ ಕೊಡಲು ಸಿದ್ಧನಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ತನಿಖಾ ವರದಿ ಏನು ಹೇಳುತ್ತೆ ನೋಡೋಣ. ಅದು ಸ್ವಯಂಕೃತ ಗಾಯನಾ?, ಬೇರೆಯವರು ಚಾಕು ಹಾಕಿದ್ದರಾ?. ಕುಡಿಸಿ ಬಿಟ್ಟು ಮಾಡಿದ್ದರಾ?. ಆತ ಶರ್ಟ್ ಹಾಕಿಕೊಂಡು ಬಂದು ದೂರು ಕೊಟ್ಟಿದ್ದಾನೆ. ಶರ್ಟ್ ಮೇಲೆ ಹಲ್ಲೆ ಮಾಡಿದ್ದಾರಾ?. ಚಾಕು ಶರ್ಟ್ ಮೇಲೆ ಹೊಡೆದರಾ?. ಹಾಗಾದರೆ ಶರ್ಟ್ ಹರಿಬೇಕಿತ್ತಲ್ವಾ ಎಂದು ಪ್ರಶ್ನಿಸಿದರು. ತನಿಖೆಯಿಂದ ಸತ್ಯ ಹೊರಬರಲಿ. ಅದು ರೆಂಟ್ ಅಗ್ರೀಮೆಂಟ್ ಆಗಿತ್ತು. ಆತನಿಂದ ಒರಿಜಿನಲ್ ಒಪ್ಪಂದದ ಪ್ರತಿ ತರಲು ನಮ್ಮವರು ಹೋಗಿದ್ದರು. ಅಧಿಕೃತ ಪಿಎಅನ್ನು ಹಲ್ಲೆ ಮಾಡಲು ಕಳುಹಿಸುತ್ತಾರಾ?. ಯಾರಾದರೂ ಪಿಎನ ಹೊಡೆಯೋಕೆ ಕಳುಹಿಸ್ತಾರಾ?. ಘಟನೆ ನಡೆದು ಒಂದು ಗಂಟೆ ಬಳಿಕ ಆತ ಕಥೆ ಕಟ್ಟುತ್ತಾನೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಕಾರ್ಯಕರ್ತನ ಮೇಲಿನ ಹಲ್ಲೆ ಕೇಸ್ ತನಿಖೆಗೆ ಸೂಚಿಸಲಾಗಿದೆ: ಇದಕ್ಕೂ ಮುನ್ನ ಬಿಜೆಪಿ ಕಾರ್ಯಕರ್ತನ ಹಲ್ಲೆ ವಿಚಾರವಾಗಿ ಗೃಹ ಸಚಿವ ಜಿ.ಪರಮೇಶ್ವರ್ ಕೂಡ ಪ್ರತಿಕ್ರಿಯೆ ನೀಡದ್ದರು. ಘಟನೆ ನಡೆದಿದೆ ಎಂಬ ಮಾಹಿತಿ ಇದೆ. ಈ ಕುರಿತು ಪೊಲೀಸರು ತನಿಖೆ ನಡೆಸಿ ವರದಿ ನೀಡಲಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಆಧರಿಸಿ ಮಾಹಿತಿ ನೀಡಲು ಸೂಚಿಸಲಾಗಿದೆ. ಇದರಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚಲಿದ್ದಾರೆ ಎಂದು ಹೇಳಿದ್ದಾರೆ.
ಘಟನೆ ನಡೆದಾಗ ಕಾರಿನಲ್ಲಿ ಚನ್ನರಾಜ ಹಟ್ಟಿಹೊಳಿ ಇದ್ದರು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ, ವಾಹನ ಸಿಸಿಟಿವಿ ಪರಿಶೀಲನೆ ಮಾಡುತ್ತಿದ್ದಾರೆ. ವರದಿ ಹಾಗೂ ದಾಖಲೆಗಳು ಸಿಕ್ಕ ಬಳಿಕ ಮಾತನಾಡುತ್ತೇನೆ ಎಂದು ಗೃಹ ಮಂತ್ರಿ ಹೇಳಿದ್ದಾರೆ.
ಇದನ್ನೂ ಓದಿ: ಹಲ್ಲೆ ಪ್ರಕರಣ; ಎಫ್ಐಆರ್ ದಾಖಲಿಸದಂತೆ ಹೈದರಾಬಾದ್ನಿಂದ ಪೊಲೀಸರ ಮೇಲೆ ಒತ್ತಡ: ರಮೇಶ್ ಜಾರಕಿಹೊಳಿ