ಅಥಣಿ: ಕರ್ನಾಟಕದ ತುಬಚಿ - ಬಬಲೇಶ್ವರ ಏತ ನೀರಾವರಿ ಯೋಜನೆಯ ನೀರನ್ನ ಮಹಾರಾಷ್ಟ್ರದ ಬೋರಾ ನದಿಗೆ ಹರಿಸುವ ಹೇಳಿಕೆ ಬೆನ್ನಲ್ಲೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳಿಗೆ ಎಂಬಿ ಪಾಟೀಲ್ ತಿರುಗೇಟು ನೀಡಿದ್ದಾರೆ.
ಕರ್ನಾಟಕದ ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಯ ನೀರನ್ನ ಮಹರಾಷ್ಟ್ರದ ಬೋರಾ ನದಿಗೆ ಹರಿಸುವ ಹಾಗೂ ಮಹಾರಾಷ್ಟ್ರದ ಮೈಸಾಳ ಏತ ನೀರಾವರಿ ಯೋಜನೆಯಿಂದ ವಂಚಿತವಾದ ಜತ್ತ ತಾಲೂಕಿನಲ್ಲಿ ಕನ್ನಡಿಗರೇ ವಾಸವಾಗಿದ್ದು, 48 ಹಳ್ಳಿಗಳ ರೈತರಿಗೆ ನೀರು ಹರಿಸಲು ಮಹಾರಾಷ್ಟ್ರ ಸರ್ಕಾರ ದೊಂದಿಗೆ ಸಹಕರಿಸುವುದು ನಮ್ಮ ಸರ್ಕಾರದ ಗುರಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮತ್ತು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಹಾರಾಷ್ಟ್ರ ಗಡಿ ಭಾಗದ ಜತ್ತ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿದ್ದರು.
ಈ ಹೇಳಿಕೆಗೆ ಎಂ.ಬಿ.ಪಾಟೀಲ್ ತಿರುಗೇಟು ನೀಡಿದ್ದಾರೆ, ಮಹಾರಾಷ್ಟ್ರ ಉಮರಾಣಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಪ್ರಚಾರದ ವೇಳೆ ಮಾತನಾಡಿದ ಎಂಬಿಪಿ, ರಾಜ್ಯದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ತುಬಚಿ - ಬಬಲೇಶ್ವರ ಏತ ನೀರಾವರಿ ನಮ್ಮ ಬಿಜೆಪಿ ಸರ್ಕಾರದ ಯೋಜನೆ ಎಂದು ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ಬಬಲೇಶ್ವರ - ತುಬಚಿ ಏತನೀರಾವರಿ ಕಾಂಗ್ರೆಸ್ ಸರ್ಕಾರದ, ಅದರಲ್ಲೂ ಎಂ.ಬಿ.ಪಾಟೀಲ್ ಕನಸಿನ ಕೂಸು, 3,600 ಕೋಟಿ ರೂಪಾಯಿ ಯೋಜನೆ ಎಂದಿದ್ದಾರೆ.
ತುಬಚಿ-ಬಬಲೇಶ್ವರ ಏತ ನಿರಾವರಿ ಯೋಜನೆಯ ಅಪ್ಪ, ಅಮ್ಮ ನಾನೇ, ಬಿಜೆಪಿಗೆ ಸಂಬಂಧ ವಿಲ್ಲ ಎಂದು ಹೇಳಿದರು. ಇದೆ ಸಂದರ್ಭದಲ್ಲಿ ಮಾತನಾಡುತ್ತಾ ಬಿ.ಎಸ್.ಯಡಿಯೂರಪ್ಪ ಸುಳ್ಳು ಹೇಳುವ ಮನುಷ್ಯ ಅಲ್ಲ. ಆದರೆ ಇಲ್ಲಿರುವವರು ತಪ್ಪು ಮಾಹಿತಿ ನೀಡಿ ಅವರ ಕಡೆಯಿಂದ ಹೇಳಿಸಿದ್ದಾರೆ ಅಷ್ಟೇ . ಲಕ್ಷ್ಮಣ ಸವದಿ ಸುಳ್ಳು ಹೇಳುವ ಮನುಷ್ಯ, ಸರಿಯಾದ ಮಾಹಿತಿ ಇಲ್ಲ. ನೇರವಾಗಿ ಲಕ್ಷ್ಮಣ್ ಸವದಿಗೆ ಸವಾಲು ಹಾಕುತ್ತೇನೆ. ತುಬಚಿ-ಬಬಲೇಶ್ವರ ಏತ ನಿರಾವರಿ ಯೋಜನೆ ಬಗ್ಗೆ ಬಹಿರಂಗ ಸಭೆಯಲ್ಲಿ ಮಾತನಾಡೋಣ ಎಂದು ಸವಾಲು ಹಾಕಿದ್ದಾರೆ.
ಇಂದು ಸಂಜೆ ಮಹಾರಾಷ್ಟ್ರದ ಜತ್ತ ತಾಲೂಕಿನ ಉಮರಾಣಿ ಗ್ರಾಮಕ್ಕೆ ಲಕ್ಷ್ಮಣ ಸವದಿ ಭೇಟಿ ಕೊಡಲಿದ್ದಾರೆ. ಎಂಬಿಪಿ ಸವಾಲಿಗೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದುನೋಡಬೇಕಿದೆ ಎಂದಿದ್ದಾರೆ.