ಅಥಣಿ/ಬೆಳಗಾವಿ: ತಾಲೂಕಿನ ಹಾಲಳ್ಳಿ ಗ್ರಾಮದಲ್ಲಿ ಜಮೀನು ತಕರಾರಿಗೋಸ್ಕರ ಸಹೋದರನ ತಲೆ ಮೇಲೆ ಭಾರಿ ಗಾತ್ರದ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿರುವ ಪ್ರಕರಣ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಶಿವಲಿಂಗ ಐಗಳಿ (63) ಎಂದು ಗುರುತಿಸಲಾಗಿದೆ.
ಕೊಲೆ ಮಾಡಿರುವ ಆರೋಪದಡಿ ಬಸಪ್ಪ ಐಗಳಿ ಎಂಬುವರನ್ನು ಸದ್ಯ ಐಗಳಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇವರಿಬ್ಬರ ನಡುವೆ ಜಮೀನು ವ್ಯಾಜ್ಯಕ್ಕೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.
ಘಟನೆ ವಿವರ:
ಕೇವಲ ಐದು ಗುಂಟೆ ಜಮೀನು ಅಣ್ಣ- ತಮ್ಮಂದಿರ ಜಗಳಕ್ಕೆ ಕಾರಣವಾಗಿತ್ತು. ಕೊಲೆಯಾದ ಶಿವಲಿಂಗ ಸರ್ಕಾರಿ ಶಾಲೆಯ ಕಟ್ಟೆಯ ಮೇಲೆ ಮಲಗಿದ್ದ ಸಂದರ್ಭದಲ್ಲಿ ಬಸಪ್ಪ ಐಗಳಿ ದೊಡ್ಡ ಕಲ್ಲನ್ನು ತಲೆ ಮೇಲೆ ಹಾಕಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಘಟನೆ ಬಳಿಕ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಅಥಣಿ ಡಿವೈಎಸ್ಪಿ ಎಸ್ ವಿ ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.