ಬೆಳಗಾವಿ: ಬಿಜೆಪಿ ನಾಯಕರು ಲಕ್ಷ್ಮಣ ಸವದಿ ಅವರಿಗೆ ಉಪಮುಖ್ಯಮಂತ್ರಿ ಪಟ್ಟ ನೀಡಿ ಉಪಚುನಾವಣೆಯಲ್ಲಿ ಟಿಕೆಟ್ ನೀಡದಿರುವುದು ಬೇಸರ ತರಿಸಿದೆ ಎಂದು ಶಾಸಕ ಎಂ.ಬಿ. ಪಾಟೀಲ್ ಹೇಳಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸವದಿ ಬಿಜೆಪಿಯಲ್ಲಿದ್ದರೂ ನನ್ನ ಮತ್ತು ಅವರ ಸಂಬಂಧ ಉತ್ತಮವಾಗಿದೆ. ಉಪಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಆದರೆ, ಟಿಕೆಟ್ ಕೊಡುವಲ್ಲಿ ಮಾತ್ರ ಬಿಜೆಪಿ ನಾಯಕರು ಒಲವು ತೋರಿಸಿಲ್ಲ. ಸವದಿಗೆ ಟಿಕೆಟ್ ತಪ್ಪಿದರ ಪರಿಣಾಮ ಕಾಂಗ್ರೆಸ್ ಅಭ್ಯರ್ಥಿಗೆ ಲಾಭ ಆಗಲಿದೆ ಎಂದು ಭವಿಷ್ಯ ನುಡಿದರು.
ನನಗೆ ಅಥಣಿ ಮತ ಕ್ಷೇತ್ರದ ಉಸ್ತುವಾರಿ ನೀಡಲಾಗಿದೆ. 12 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವ ಭರವಸೆ ಇದೆ. ಇಂದಿನಿಂದಲೇ ಚುನಾವಣೆ ಕೆಲಸ ಆರಂಭಿಸಲಿದ್ದು, ಹೈಕಮಾಂಡ್ ಸೂಚಿಸಿದ ಕಡೆಗೆ ಪ್ರಚಾರಕ್ಕೆ ಹೋಗುತ್ತೇನೆ ಎಂದ ಅವರು, ಮೈತ್ರಿ ಸರ್ಕಾರ ಉರಳಿಸಲು ಅನರ್ಹ ಶಾಸಕರೇ ಕಾರಣ ಎಂಬುದು ಇಡೀ ದೇಶಕ್ಕೆ ಗೊತ್ತಿರುವ ವಿಚಾರ. ಚುನಾವಣೆಯಲ್ಲಿ ಮತದಾರರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.
ಆಪರೇಷನ್ ಕಮಲ ಹಿಂದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕೈವಾಡವಿದೆ. ಅನರ್ಹರು ಅವರು ರಾಜೀನಾಮೆ ನೀಡುವಾಗ ಕ್ಷೇತ್ರದ ಜನರನ್ನು ಕೇಳಿದ್ದರಾ? ನೆರೆ ಹಾವಳಿ ಸಂದರ್ಭದಲ್ಲಿ ಅನರ್ಹ ಶಾಸಕರು ಕ್ಷೇತ್ರದ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಈಗ ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಾರೆ ಎಂದು ಕಿಡಿಕಾರಿದರು.
ಬ್ಯಾಗ್ ಹಿಡಿದು ಬಾಗಿಲು ಕಾಯುವವರಿಗೆ ಮಾತ್ರ ಕಾಂಗ್ರೆಸ್ನಲ್ಲಿ ಗೌರವ ಜಾಸ್ತಿ ಎಂಬ ರಮೇಶ್ ಜಾರಕಿಹೊಳಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ರಮೇಶ್ ಜಾರಕಿಹೊಳಿ ದೊಡ್ಡವರು. ಯಾವಾಗ ಏನು ಮಾತನಾಡುತ್ತಾರೆ ಗೊತ್ತಿಲ್ಲ. ಅವರ ಬಗ್ಗೆ ನಾನೇನೂ ಹೇಳಲ್ಲ ಎಂದರು.