ಬೆಳಗಾವಿ: ಶೂನ್ಯ ಕೊರೊನಾ ಪ್ರಕರಣಗಳು ಇರಬೇಕಾದ ಬೆಳಗಾವಿಯಲ್ಲಿ ದೆಹಲಿಯ ತಬ್ಲಿಘಿ ಜಮಾತ್ ಜನರಿಂದ ಕೊರೊನಾ ಪಾಸಿಟಿವ್ ಕೇಸ್ ಹೆಚ್ಚಾಗಿದ್ದವು. ಆದ್ರೆ, ಇದರ ಜೊತೆಗೆ ಅಜ್ಮೀರದಿಂದ ಬಂದಿರುವ ಜನರು ಮತ್ತೊಂದು ತಲೆನೋವಾಗಿ ಪರಿಣಮಿಸಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಖಾತೆ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿ ಇಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಹೊರಗಿನಿಂದ ಬಂದವರ ನಿರ್ಲಕ್ಷ್ಯವೇ ಇಂದು ಬೆಳಗಾವಿ ರೆಡ್ ಝೋನ್ಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ಅಧಿಕಾರಿಗಳು ನಿಯಂತ್ರಣಕ್ಕೆ ತರುವ ಕೆಲಸ ಮಾಡುತ್ತಿದ್ದು, ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಡೆಯಲು ಸಾಧ್ಯವಾಗಿದ್ದು, ಜಿಲ್ಲಾಡಳಿತದ ಕಾರ್ಯಕ್ಕೆ ಅಭಿನಂದನೆಗಳು ಎಂದರು.
ಕೊರೊನಾ ವೈರಸ್ ಇಂದು, ನಾಳೆ ಮುಗಿಯುವುದಿಲ್ಲ. ಹೀಗಾಗಿ ಕೋವಿಡ್ ವಿರುದ್ಧ ಹೋರಾಟದ ಜೊತೆ ಜೊತೆಗೆ ರಾಜ್ಯದ ಆರ್ಥಿಕತೆ ಚೇತರಿಕೆ ನೀಡುವ ನಿಟ್ಟಿನಲ್ಲಿ ಈಗಾಗಲೇ ಎಲ್ಲ ಕೈಗಾರಿಕೆಗಳನ್ನು ಆರಂಭಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಆದರೆ, ಕೈಗಾರಿಕೆಗಳನ್ನು ಪ್ರಾರಂಭಿಸಲು ಅವಕಾಶ ನೀಡಿದರೂ ಕೇವಲ ಶೇ 25 ರಷ್ಟು ಕೈಗಾರಿಕೆಗಳು ಮಾತ್ರ ಆರಂಭಿಸಿವೆ. ಕೈಗಾರಿಕೆಗಳಲ್ಲಿ ಇನ್ನೂ ಹಲವಾರು ಸಮಸ್ಯೆಗಳಿದ್ದು, ಅವರಿಗೆ ಇನ್ನು ಹೆಚ್ಚಿನ ಅವಕಾಶ ನೀಡಿ, ಒಳ್ಳೆಯ ವಾತಾವರಣ ನೀಡುವ ಮೂಲಕ ಚೇತರಿಕೆಗೆ ಒತ್ತು ನೀಡಲಾಗುವುದು ಎಂದರು.