ಬೆಳಗಾವಿ: ರಸ್ತೆ ಕಾಮಗಾರಿಗೆ ರೈತರ ಜಮೀನನ್ನು ಸ್ವಾಧಿನ ಪಡೆಸಿಕೊಳ್ಳಲು ಅಧಿಕಾರಿಗಳು ಕಲ್ಲುಗಳನ್ನು ಅಳವಡಿಸಿದ್ದಾರೆ ಎಂದು ಆಕ್ರೋಶಗೊಂಡ ತಾಲೂಕಿನ ವಡಗಾವಿ, ಯರಮಾಳ ರೈತರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ಕಲ್ಲುಗಳನ್ನು ತೆರವುಗೊಳಿಸಿದರು.
ಅಧಿಕಾರಿಗಳು ಭೂಸ್ವಾಧೀನಪಡಿಸಿಕೊಳ್ಳಲು ತಮಗೆ ಯಾವುದೇ ನೋಟಿಸ್ ನೀಡದೇ ಏಕಾಏಕಿ ರೈತರ ಜಮೀನಿನ ಪಕ್ಕದಲ್ಲಿ ಕಲ್ಲು ಹಾಕಿರವುದಕ್ಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಡಗಾವಿ, ಯರಮಾಳ ರಸ್ತೆ ಪಕ್ಕ ಹಾಕಿರುವ ಕಲ್ಲುಗಳನ್ನು ಗುದ್ದಲಿಯಿಂದ ತೆಗೆದು ಹಾಕಿರುವ ರೈತರು, ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ವಡಗಾವಿ-ಯರಮಾಳ ರಸ್ತೆ ಪಕ್ಕದಲ್ಲಿ ಶುಕ್ರವಾರ ರಾತ್ರೋ ರಾತ್ರಿ ಅಧಿಕಾರಿಗಳು ಪೈಪ್ಲೈನ್ ಕಾಮಗಾರಿಗಾಗಿ ಕಲ್ಲುಗಳನ್ನು ಅಳವಡಿಸಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ ಶಾಹಪುರ-ವಡಗಾವಿ ಭಾಗದ ರೈತರು ಅಧಿಕಾರಿಗಳ ನಡೆಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಕಲ್ಲು ಹಾಕಿದ್ದಾರೆ. ಆದರೆ, ಈ ಬಗ್ಗೆ ರೈತರಿಗೆ ಯಾವುದೇ ನೋಟಿಸ್ ನೀಡಿಲ್ಲ. ರೈತರ ಜಮೀನಿನಲ್ಲಿ ಅನುಮತಿಯನ್ನೂ ಪಡೆಯದೆ ಕಲ್ಲು ಅಳವಡಿಸಲಾಗಿದೆ ಎಂದು ದೂರಿದ್ದಾರೆ.
ಹಲಗಾದಿಂದ ಮಚ್ಚೆ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿಯೂ ಅಧಿಕಾರಿಗಳು ರೈತರಿಗೆ ಮೋಸ ಮಾಡಿದ್ದಾರೆ. ಈಗ ವಡಗಾವಿ-ಯರಮಾಳ ರಸ್ತೆಯಲ್ಲಿ ರೈತರ ಜಮೀನನ್ನು ಕಬಳಿಸುವ ಹುನ್ನಾರ ನಡೆಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.