ಬೆಳಗಾವಿ: ನಮ್ಮ ವರಿಷ್ಠರ ಸಲಹೆ ಪಡದುಕೊಂಡು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಕೆಲ ಸಂಪುಟ ಸಹೋದ್ಯೋಗಿಗಳ ಖಾತೆ ಬದಲಿಸಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದರು.
ಖಾತೆಗಳ ಬದಲಾವಣೆ ಹಿನ್ನಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಟೀಕೆಗೆ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ ಲಕ್ಷ್ಮಣ ಸವದಿ, ಖಾತೆಗಳ ಅದಲು ಬದಲು ಮಾಡುವ ಅಧಿಕಾರ ಮುಖ್ಯಮಂತ್ರಿಗಿದೆ. ವರಿಷ್ಠರ ಜತೆಗೆ ಚರ್ಚಿಸಿಯೇ ಸಿಎಂ ಈ ತೀರ್ಮಾನ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪದಲ್ಲಿ ಯಾವುದೇ ಹರುಳಿಲ್ಲ. ರಾಜಕೀಯಕ್ಕಾಗಿ ಈ ಹೇಳಿಕೆ ನೀಡಿರಬಹುದು. ಇಲಾಖೆ ಬದಲಾದ್ರೇ ಅಸಮರ್ಥರು ಅಂತಲ್ಲ. ಒಳ್ಳೆ ಕೆಲಸ ಆಗಬೇಕು ಅಂತ ತೀರ್ಮಾನ ಮಾಡಲಾಗಿದೆ ಎಂದರು.
ಇನ್ನೂ ಸಿದ್ದರಾಮಯ್ಯ ಸಿಎಂ ಇದ್ದಾಗ ಎರಡು ವರ್ಷ ಡಿಕೆಶಿಯನ್ನು ಮಂತ್ರಿ ಮಂಡಲದಲ್ಲಿ ಸೇರಿಸಿಕೊಂಡಿರಲಿಲ್ಲ. ಹಾಗಾದ್ರೆ, ಡಿಕೆಶಿ ಅಸಮರ್ಥರು ಅನ್ನುವ ಕಾರಣಕ್ಕೆ ಬಿಟ್ಟಿದ್ರಾ? ಕೆಲ ಸನ್ನಿವೇಶದಲ್ಲಿ, ಸಂದರ್ಭದಲ್ಲಿ ಬದಲಾವಣೆ ಮಾಡಬೇಕಾಗುತ್ತದೆ ಎಂದರು.
ಆರ್‌ಆರ್ ನಗರ ಮತ್ತು ಶಿರಾ ಎರಡೂ ಕ್ಷೇತ್ರದ ಉಪಚುನಾವಣೆಯಲ್ಲಿ ನಮಗೆ ಗೆಲ್ಲುವ ಅವಕಾಶ ಹೆಚ್ಚಿದೆ. ಉಪಚುನಾವಣೆಗಳಲ್ಲಿ ಆಡಳಿತ ಪಕ್ಷದ ಅಭ್ಯರ್ಥಿಗಳನ್ನೇ ಆಯ್ಕೆ ಮಾಡುವ ಮನೋಭಾವ ರಾಜ್ಯದ ಜನರಿಗಿದೆ. ಕಾರ್ಯಕರ್ತರ ಪಡೆ ದೊಡ್ಡದಿದೆ. ಮತದಾರರ ಒಲವು ಬಿಜೆಪಿ ಕಡೆಯಿದ್ದು, ಎರಡು ಕಡೆ ಗೆಲ್ಲಲು ಅವಕಾಶ ಇದೆ ಎಂದರು.