ಬೆಳಗಾವಿ: ಹಿಂದೂ ಧರ್ಮಕ್ಕೆ ಸಾವಿರಾರು ವರ್ಷಗಳಿಂದ ಮೊಘಲರು ಬಂದರೂ ಏನೂ ಮಾಡಕ್ಕಾಗಿಲ್ಲ. ಮುಗ್ಧ ಜನರನ್ನು ಇಟ್ಟುಕೊಂಡು ನೀನು ಏನ್ ಮಾಡುತ್ತೀಯೋ. ನಿನಗೆ ತಾಕತ್ ಇದ್ರೆ ನನ್ನ ಜೊತೆ ಯುದ್ಧಕ್ಕೆ ಬಾ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೆಸರನ್ನು ಉಚ್ಛರಿಸದೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದರು.
ಜಿಲ್ಲೆಯ ಗೋಕಾಕ್‌ನಲ್ಲಿ ನಡೆದ ಲಿಂಗಾಯತ ಪಂಚಮಸಾಲಿ ಸಮಾವೇಶದಲ್ಲಿ ಮಾತನಾಡಿದ ಅವರು, ಲಿಂಗಾಯತರು 11 ರೂಪಾಯಿ ಅಂದವರಿಗೆ ಎಲ್ಲರೂ ಉತ್ತರ ಕೊಡಬೇಕು. ಭಾರತ ರತ್ನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಈ ದೇಶದ ಸಂವಿಧಾನ ಬರೆದರು. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಕಷ್ಟಪಟ್ಟಷ್ಟು ಯಾರೂ ಅನುಭವಿಸಿಲ್ಲ. ಜಗತ್ತಿನ ಯಾವುದೇ ನಾಯಕ ಅನುಭವಿಸಿದ ಕಷ್ಟವನ್ನು ಅಂಬೇಡ್ಕರ್ ಅನುಭವಿಸಿದ್ದಾರೆ. ಭಾರತ ಸಂಸ್ಕೃತಿ ಹೇಗಿದೆ ಎಂದರೆ ರಾಮಾಯಣ ಮಹರ್ಷಿ ವಾಲ್ಮೀಕಿ ಬರೆದಿದ್ದಾರೆ. ವೇದವ್ಯಾಸರು ಮಹಾಭಾರತ ಬರೆದಿದ್ದಾರೆ. ಇನ್ನು, ಡಾ.ಬಾಬಾಸಾಹೇಬ್ ಅಂಬೇಡ್ಕರ್ ರಂತಹ ಮಹಾತ್ಮರು ಹಿಂದೂಗಳ ಬಗ್ಗೆ ಮಾತನಾಡಲಿಲ್ಲ ಎಂದರು.
ಬುದ್ಧ, ಬಸವ, ಅಂಬೇಡ್ಕರ್ ನಾವೇ ಮಾಡಿದ್ದೋ ಮಾರಾಯ. ನೀ ಫೋಟೋ ಹಾಕೊಂಡ್ರೆ ನಿಂದು ಆಯ್ತೇನೋ. ನಾನು ಹಿಂದೂ ಧರ್ಮದಲ್ಲಿ ಹುಟ್ಟಿದ್ದೇನೆ. ಸಾಯುವಾಗ ಹಿಂದೂ ಧರ್ಮದಲ್ಲಿ ಇರಲ್ಲ ಎಂದು ಅಂಬೇಡ್ಕರ್ ಹೇಳಿದರು. 1956ರಲ್ಲಿ ನಾಗ್ಪುರದಲ್ಲಿ ಬೌದ್ಧ ಧರ್ಮ ಸ್ವೀಕಾರ ಮಾಡಿದ ಅವರು, ಅಪ್ಪಿ ತಪ್ಪಿಯೂ ಇಸ್ಲಾಂ, ಮುಸ್ಲಿಂ, ಸಿಖ್ ಧರ್ಮಕ್ಕೆ ಹೋಗಲಿಲ್ಲ. ನಾನು ಅಂಬೇಡ್ಕರ್ ಪುಸ್ತಕ ಓದಿದ್ದೀನಿ, ವಿಧಾನಸಭೆಯಲ್ಲಿ ಮಾತನಾಡಿದೀನಿ. ತಾಕತ್ ಇದ್ರೆ ನೀನು ಮಾತನಾಡಬೇಕಾಗಿತ್ತು ಎಂದು ಸತೀಶ್ ಜಾರಿಕಿಹೊಳಿ ವಿರುದ್ಧ ಯತ್ನಾಳ್ ಕಿಡಿಕಾರಿದರು.
ವಾಲ್ಮೀಕಿ ಸಮುದಾಯ, ಪರಿಶಿಷ್ಟ ಸಮಾಜಕ್ಕೆ ಮೀಸಲಾತಿ ಬೇಕು ಅಂತಾ ವಿಧಾನಸಭೆಯಲ್ಲಿ ಕೇಳಿದ್ದೆ. ನಾನು ಕೇವಲ ಪಂಚಮಸಾಲಿ ಸಮಾಜದ ಬಗ್ಗೆ ಮಾತನಾಡಿಲ್ಲ. ಸಮಾಜದ ಎಲ್ಲ ಜನರ ವಿಚಾರದ ಬಗ್ಗೆ ಮಾತನಾಡಿದೀನಿ. ನೀ ಎಂದು ಮಾತನಾಡಿದೀಯಪ್ಪ ಎಂದು ಪರೋಕ್ಷವಾಗಿ ಸತೀಶ್ ಜಾರಕಿಹೊಳಿಗೆ ಪ್ರಶ್ನಿಸಿದರು.
ನಿನ್ನ ಮನೆಗೆ ಕಳಿಸುತ್ತಾರೆ: ಲಿಂಗಾಯತರು 11 ರೂಪಾಯಿ ಪಟ್ಟಿ ಕೊಟ್ಟವರಾ?, ಅದೇ 11 ರೂ. ಪಟ್ಟಿ ಕಟ್ಟಿ ನಿನ್ನ ಮನೆಗೆ ಕಳಿಸುತ್ತಾರೆ. ನಾ ಎಲ್ಲಿ ಜಾತಿ ಮಾಡೇನೋ ಮೊಮ್ಮಕ್ಕಳೇ. ಬ್ರಾಹ್ಮಣರನ್ನು ಸಹ ಅಲ್ಪಸಂಖ್ಯಾತಕ್ಕೆ ಸೇರಿಸಿ ಅಂದಿದೀನಿ. ಬಿಜಾಪುರ ಜನ ಹುಂಬರು. ಬೆಳಗಾವಿ ಜನ ಶ್ರೀಮಂತರು. ಹೆಂಗ್ ಆದ್ರೂ ಕಾಟ ಹೊಡದಾ ಹೊಡೀತಾರೆ ಎಂದು ಹೇಳಿದರು.
ನಿಮ್ಮ ಕಾಟಾ ಹೊಡಿದ ರೊಕ್ಕದಾಗ ಧಿಮಾಕ ಮಾಡಾತಾರ ಮಕ್ಕಳು. ರಮೇಶ್ ಜಾರಕಿಹೊಳಿಗೆ ಅನ್ಯಾಯ ಆದಾಗ ನಾನೇ ಧ್ವನಿ ಎತ್ತಿದ್ದೇನೆ. ರಮೇಶ್ ಜಾರಕಿಹೊಳಿಗೆ ನಮ್ಮ ಲಿಂಗಾಯತ ಸಮುದಾಯದವನೇ ಅನ್ಯಾಯ ಮಾಡಿದಾಗ ನಾನು ರಮೇಶ್ ಪರ ನಿಂತಿದ್ದೇನೆ. ನನ್ನ ಜಗ್ಗಿದ್ರ ನಿಮ್ಮನ್ನ ನಮ್ಮ ಜನರು ಜಗ್ಗುತ್ತಾರೆ. ನಾನು ಜಗಳಾಡಿ ಲಾಠಿ ಏಟು, ಬೂಟೇಟು ಪಡೆದು ಲೀಡರ್ ಆಗಿದ್ದೇನೆ. ಈಗ ವಿಜಯಪುರ ಹೆಂಗ್ ಇಟ್ಟೇನಿ ಅಂದರೆ ಯಾರು ಎರಡು ಮಾತನಾಡಂಗಿಲ್ಲ. ಮೊದಲು ಪೊಲೀಸರಿಗೆ ಅಂಜುತ್ತಿರಲಿಲ್ಲ, ಈಗ ಅವರ ನೋಡಿದ್ರ ಚಲ್ ಬಾ ಅಂತಾರೆ. ಯಮಕನಮರಡಿ ಜನರಲ್ ಕ್ಷೇತ್ರವಾಗಿರುತ್ತಿದ್ದರೆ ನಾನೇ ಬಂದು ಅಲ್ಲೇ ನಿಲ್ಲುತ್ತಿದ್ದೆ ಎಂದು ಎಚ್ಚರಿಸಿದರು.
ಈಗ ಬ್ಯಾಟರಿ ಏರುತ್ತಿದೆ: ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯ ವಂಚಿತರಾಗಿರುವ ಸಮುದಾಯಕ್ಕೆ ನ್ಯಾಯ ಕೊಡಿಸಬೇಕು. ಈರಣ್ಣ ಕಡಾಡಿಯವರೇ ನೀವು ಪವರ್‌ಫುಲ್ ಇದೀರಿ, ದೆಹಲಿದಾಗ ನಿಮ್ಮ ಮಾತು ಕೇಳ್ತಾರೆ. ನಮ್ಮ ಬ್ಯಾಟರಿ ಇಳಿದಿತ್ತು. ಈಗ ಬ್ಯಾಟರಿ ಏರುತ್ತಿದೆ. ಅರುಣ್ ಜಿ ನಮ್ಮ ಮನೆಗೆ ಬಂದು ನೀವು ಒಳ್ಳೆ ಲೀಡರ್, ನಿಮಗೆ ಒಳ್ಳೆ ಭವಿಷ್ಯ ಇದೆ ಎಂದು ಹೇಳಿದ್ದಾರೆ ಎಂದು ಯತ್ನಾಳ್ ತಿಳಿಸಿದರು.
ಹಿಂದುತ್ವದ, ಪಂಚಮಸಾಲಿ ನನ್ನ ಬೆನ್ನ ಹಿಂದೆ ಇವೆ ನೀವೆನೂ ಮಾಡಿಕೊಳ್ಳಲು ಆಗಲ್ಲ. ವಿಜಯಪುರ ಪಾಲಿಕೆ ಚುನಾವಣೆಯಲ್ಲಿ ನನ್ನ ಕೆಡವಲು ಸಾಕಷ್ಟು ಹಣ ಬಂತು. ಒಬ್ಬೊಬ್ಬ ಪಕ್ಷೇತರ ಅಭ್ಯರ್ಥಿಗೂ 20 ಲಕ್ಷ ಹಣ ಬಂತು. ಬೆಂಗಳೂರು, ಮುಧೋಳದಿಂದ ರೈತರ ಕಾಟಾ ಹೊಡೆದಿದ್ದ ದುಡ್ಡು ಬಂತು ಎಂದು ಆರೋಪಿಸಿದರು.
ಇದನ್ನೂ ಓದಿ : ಕ್ಷೇತ್ರ ಹುಡುಕಾಟ ಆರಂಭ.. ಕೋಲಾರ ಜನರ ನಾಡಿಮಿಡಿತ ಅರಿತ ಸಿದ್ದರಾಮಯ್ಯ: ಕುತೂಹಲ ಹೆಚ್ಚಿಸಿದ ಸ್ಪರ್ಧೆ ಹೇಳಿಕೆ