ಬೆಳಗಾವಿ : ಮುಂಬರುವ ಒಂದು ತಿಂಗಳ ಅವಧಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂದು ಕೂಡಲ ಸಂಗಮ ಬಸವ ಧರ್ಮ ಪೀಠದ ಬಸವಪ್ರಕಾಶ ಸ್ವಾಮೀಜಿ ಶಾಪ ಹಾಕಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ಪೊಲೀಸರನ್ನು ಚೂ ಬಿಟ್ಟು ಕಾವಿ ಕುಲಕ್ಕೆ ಅವಮಾನ ಮಾಡಿದೆ. ಈ ಅನ್ಯಾಯವನ್ನು ಲಿಂಗಾಯತ ಸಮುದಾಯ ಸಹಿಸಿಕೊಳ್ಳುವುದಿಲ್ಲ.
ಸ್ವಾಮೀಜಿಗಳನ್ನು, ಲಿಂಗನಿಷ್ಠ ಪರವಾಗಿರುವ ಕಾರ್ಯಕರ್ತರನ್ನು ಪೊಲೀಸರು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ನಾವೆಲ್ಲರೂ ಎಲ್ಲವನ್ನು ಬಿಟ್ಟ ಬಂದ್ಮೇಲೆ ಪೊಲೀಸರು ಅಕ್ಕ-ತಂಗಿಯರನ್ನು ಹಚ್ಚಿ ಬೈಯುವುದು ಅಷ್ಟೊಂದು ಸಮಂಜಸವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ಸುವರ್ಣಸೌಧಕ್ಕೆ ಹೋಗುವ ಸಂದರ್ಭದಲ್ಲಿ ಪೊಲೀಸರು ನಮ್ಮ ಮೇಲೆ ಲಾಠಿಚಾರ್ಜ್ ಮಾಡಿದರು. ಹಿಗ್ಗಾಮುಗ್ಗಾ ಬೈದಿದ್ದಾರೆ. ನಮಗೆ ನ್ಯಾಯ ಸಿಗಬೇಕು. ನಮ್ಮಂತ ಸ್ವಾಮೀಜಿಗಳಿಗೆ ಈ ರೀತಿ ಆದ್ರೆ ನಮ್ಮ ಶಾಪ ಅವರಿಗೆ ತಟ್ಟದೆ ಬಿಡೋದಿಲ್ಲ. ನಮ್ಮ ಶಾಪ ತಟ್ಟಿಯೇ ತಟ್ಟುತ್ತದೆ. ಖಂಡಿತಾ ಅವರು ಒಂದು ತಿಂಗಳಲ್ಲಿ ಅಧಿಕಾರದಿಂದ ಕೆಳಗೆ ಇಳಿಯಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.