ಚಿಕ್ಕೋಡಿ(ಬೆಳಗಾವಿ): ಕನ್ನಡದ ಜನಪ್ರಿಯ ನಟ ದಿ. ಪುನೀತ್ ರಾಜ್‍ಕುಮಾರ್ ಅವರ ನೇತ್ರದಾನ ಮಾಡಲಾಗಿತ್ತು. ಇದು ಅವರ ಕೋಟ್ಯಂತರ ಅಭಿಮಾನಿಗಳು ಹಾಗು ಇತರರಿಗೂ ಪ್ರೇರಣೆಯಾಗಿದೆ. ಈಗ ಪುನೀತ್ ಮೇಲಿನ ಅಭಿಮಾನದಿಂದ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೆರೂರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪೋಷಕರು ನೇತ್ರದಾನದ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಹಾಗೂ ಪಿಯುಸಿ ಹಾಗೂ ದ್ವಿತೀಯ ವರ್ಗದ ಸುಮಾರು 85 ವಿದ್ಯಾರ್ಥಿಗಳು ಹಾಗೂ 20 ಮಂದಿ ಪೋಷಕರು ನೇತ್ರದಾನ ಮಾಡಿ ಇತರರಿಗೆ ಮಾದರಿಯಾದರು. "ಅಪ್ಪು ಅಕಾಲಿಕ ನಿಧನದ ನಂತರ ಅವರ ಕಣ್ಣುಗಳನ್ನು ನಾಲ್ವರಿಗೆ ಕಸಿ ಮಾಡಿರುವ ವಿಷಯವನ್ನು ಶಿಕ್ಷಕರು ನಮಗೆ ತಿಳಿಸಿ ಮಾನಸಿಕವಾಗಿ ಅಣಿಗೊಳಿಸಿದ್ದಾರೆ. ನಾವು ನಮ್ಮ ಪೋಷಕರ ಬಳಿ ಈ ವಿಚಾರದ ಕುರಿತು ಹೇಳಿದಾಗ ಅವರೂ ಸಹ ಅದಕ್ಕೆ ಸಹಮತಿ ಸೂಚಿಸಿದರು. ಹೀಗಾಗಿ ನಾವು ನೇತ್ರದಾನಕ್ಕೆ ಮುಂದಾದೆವು" ಎನ್ನುತ್ತಾರೆ ವಿದ್ಯಾರ್ಥಿನಿಯರು.
ಇದನ್ನೂ ಓದಿ: ಅಪ್ಪು ಪ್ರೇರಣೆ.. ಜನ್ಮದಿನದಂದು ನೇತ್ರದಾನಕ್ಕೆ ಸಹಿ ಹಾಕಿದ ಶಾಸಕ ಅಮೃತ್ ದೇಸಾಯಿ ದಂಪತಿ
"ಡಾ.ಪುನೀತ್ ರಾಜ್‍ಕುಮಾರ್ ಅವರು ತಮ್ಮ ಮರಣಾನಂತರ ನೇತ್ರಗಳನ್ನು ದಾನ ಮಾಡಿದ್ದು ನಮಗೆ ಪ್ರೇರಣೆಯಾಗಿದೆ. ಸಾವಿನ ನಂತರ ನಾಶವಾಗುವ ನಮ್ಮ ನೇತ್ರಗಳನ್ನು ದಾನ ಮಾಡಿದ್ದಲ್ಲಿ, ನಮ್ಮ ಕಣ್ಣುಗಳು ಅಂಧರ ಬಾಳಿಗೆ ಬೆಳಕಾಗುತ್ತವೆ. ಅಷ್ಟೇ ಅಲ್ಲ, ನಾವೂ ಜೀವಂತವಾಗಿರುತ್ತೇವೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದ್ದರಿಂದ ತಾವಷ್ಟೇ ಅಲ್ಲ, ತಮ್ಮ ಕುಟುಂಬಸ್ಥರನ್ನೂ ಅವರು ನೇತ್ರದಾನಕ್ಕೆ ಮನವೊಲಿಸಿದ್ದಾರೆ. ಮುಂದಿನ ದಿನಗಳಲ್ಲಿ ನೇತ್ರದಾನದ ಬಗ್ಗೆ ಮನವರಿಕೆ ಮಾಡಿಕೊಡುವ ಕಾರ್ಯ ಮುಂದುವರೆಯಲಿದೆ" ಎಂದು ಪ್ರಾಧ್ಯಾಪಕ ಶ್ರೀಶೈಲ ಕೋಲಾರ ತಿಳಿಸಿದ್ದಾರೆ.
ಕಲಾವಿದರಿಂದ ನೇತ್ರದಾನ: ಪುನೀತ್ ಅವರ ಸ್ಫೂರ್ತಿಯಿಂದ 100ಕ್ಕೂ ಹೆಚ್ಚು ಕಲಾವಿದರು ಕಳೆದ ವರ್ಷ ತಮ್ಮ ನೇತ್ರದಾನ ಮಾಡಲು ಮುಂದಾಗಿದ್ದರು. ಈ ಬಗ್ಗೆ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್ ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಅಪ್ಪು ಅಮರ.. 100ಕ್ಕೂ ಹೆಚ್ಚು ಕಲಾವಿದರಿಂದ ನೇತ್ರದಾನದ ವಾಗ್ದಾನ.. ಪುನೀತ್‌ಗೆ ಸೆಲ್ಯೂಟ್ ಎಂದ ರಾಘಣ್ಣ..
60ಕ್ಕೂ ಹೆಚ್ಚು ಜನರಿಂದ ನೇತ್ರದಾನ: ಪವರ್ ಸ್ಟಾರ್ ನಡೆದ ಮಾದರಿ ಹಾದಿಯಲ್ಲಿ ದಾವಣಗೆರೆ ತಾಲೂಕಿನ ಚಟ್ಟೋಬನಹಳ್ಳಿ ತಾಂಡದ ಗ್ರಾಮದಲ್ಲಿ ಸುಮಾರು 60ಕ್ಕೂ ಹೆಚ್ಚು ಜನರು ಕಣ್ಣು ದಾನ ಮಾಡುವುದಾಗಿ ಇತ್ತೀಚೆಗೆ ಘೋಷಿಸಿದ್ದರು. ಪುನೀತ್ ಅಗಲಿಕೆಯಿಂದ ಆಘಾತಕ್ಕೊಳಗಾಗಿದ್ದ ಚಟ್ಟೋಬನಹಳ್ಳಿ ಗ್ರಾಮಸ್ಥರು ಒಂದು ವಾರ ಶೋಕದಲ್ಲಿ ಮುಳುಗಿದ್ದರು. ನಟ ಪುನೀತ್ ನೇತ್ರದಾನ ಮಾಡಿದ್ದರಿಂದ ಅವರ ಅಭಿಮಾನಿಗಳು ಕೂಡ ಈ ಆದರ್ಶವನ್ನು ಮೈಗೂಡಿಸಿಕೊಂಡಿದ್ದು, 60ಕ್ಕೂ ಅಧಿಕ ಮಂದಿ ದಾವಣಗೆರೆಯ ಜೆಜೆಎಮ್ ಮೆಡಿಕಲ್ ಕಾಲೇಜಿನ ಐ ಬ್ಯಾಂಕ್ಗೆ ನೇತ್ರದಾನ ಮಾಡುವ ವಾಗ್ದಾನದಿಂದ ಪುನೀತ್‌ಗೆ ನಮನ ಸಲ್ಲಿಸಿದ್ದರು. ಇಲ್ಲಿಯವರೆಗೂ ಅಭಿಮಾನಿಗಳ ಮಟ್ಟದಲ್ಲಿದ್ದ ನೇತ್ರದಾನದ ಅರಿವು ಹಾಗೂ ಕಾಳಜಿ ಈಗ ವಿದ್ಯಾರ್ಥಿಗಳ ಮಟ್ಟದಲ್ಲಿ ಜಾಗೃತವಾಗುತ್ತಿರುವುದು ವಿಶೇಷ ಸಂಗತಿ.
ಇದನ್ನೂ ಓದಿ: ಅಪ್ಪು ಪ್ರೇರಣೆ: ದಾವಣಗೆರೆಯ ಜಿಲ್ಲೆಯ ಈ ಗ್ರಾಮದಲ್ಲಿ 60ಕ್ಕೂ ಹೆಚ್ಚು ಜನರಿಂದ ನೇತ್ರದಾನ