ಬೆಂಗಳೂರು: ಆರ್.ಆರ್.ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಶವಂತಪುರದಲ್ಲಿ ಜಮೀರ್ ಅಹಮದ್ ಖಾನ್ ರೋಡ್ ಶೋ ನಡೆಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಪರ ಮತಯಾಚಿಸಿದರು. ಬಿ.ಕೆ.ನಗರ ವಾರ್ಡ್ನಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಾ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಶಿರಾ ಪ್ರಚಾರದಲ್ಲಿದ್ದ ಕಾರಣ ನನಗೆ ಆರ್.ಆರ್.ನಗರ ಪ್ರಚಾರಕ್ಕೆ ಬರಲಾಗಿರಲಿಲ್ಲ. ಇಲ್ಲಿನ ಕಾರ್ಯಕರ್ತರ ಹುಮ್ಮಸ್ಸು ನೋಡುತ್ತಿದ್ದರೆ ಶೇ. 100 ರಷ್ಟು ನಾವು ಗೆಲ್ಲುತ್ತೇವೆ ಎನ್ನುವ ವಿಶ್ವಾಸವಿದೆ ಎಂದು ಅವರು ತಿಳಿಸಿದರು.
ಜನರು ಬದಲಾವಣೆ ಕಾಣಲು ಬಯಸುತ್ತಿದ್ದಾರೆ. ಪಕ್ಷಕ್ಕೆ ಮೋಸ ಮಾಡಿ ಮುನಿರತ್ನ ಬಿಜೆಪಿಗೆ ಹೋಗಿದ್ದಾರೆ. ಈ ಕ್ಷೇತ್ರ ಅಭಿವೃದ್ಧಿ ಕಂಡಿದ್ದರೆ ಅದು ಕೇವಲ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಮಾತ್ರ. ಸುಮಾರು 4,000 ಸಾವಿರ ಕೋಟಿ ರೂ.ಗಳನ್ನು ಈ ಕ್ಷೇತ್ರ ವ್ಯಾಪ್ತಿಗೆ 5 ವರ್ಷದಲ್ಲಿ ಕೊಟ್ಟಿದ್ದು, ಮುನಿರತ್ನ ತಮ್ಮ ಜೇಬಿನಿಂದ ಒಂದು ಪೈಸೆ ಖರ್ಚು ಮಾಡಿಲ್ಲ ಎಂದರು.
ಸಿದ್ದರಾಮಯ್ಯ ಅವರ ಪ್ರಚಾರಕ್ಕೆ ಅಡ್ಡಿಪಡಿಸಿ ಮೋದಿ ಮೋದಿ ಎಂದು ಘೋಷಣೆ ಕೂಗಿದ್ದಾರೆ. ಅಚ್ಛೇ ದಿನ್ ಆಯೆಂಗೆ ಅಂತಾ ಹೇಳಿದ್ದು, ಅದು ಬಂದಿದ್ದು ಮೋದಿ ಅವರಿಗೆ ಮಾತ್ರ. ಒಬ್ಬ ಟೀ ಮಾರುವವರಿಂದು 10 ಲಕ್ಷದ ಕೋಟು ಧರಿಸುತ್ತಿದ್ದಾರೆ. ದೇಶದ ಅಭಿವೃದ್ಧಿ ಮಾತ್ರ ಆಗಿಲ್ಲ. ಹಾಗಾಗಿ ಈ ಬಾರಿ ಹೊಸ ಮುಖವನ್ನು ಗೆಲ್ಲಿಸಿ, ನಾವು ನಿಮ್ಮ ಜೊತೆ ಇರುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಕಾರ್ಯಧ್ಯಕ್ಷರಾದ ಸಲೀಂ ಅಹಮದ್ ಮಾತನಾಡಿ, ಇದೊಂದು ಧರ್ಮ ಯುದ್ಧವಾಗಿದ್ದು ಪಕ್ಷಕ್ಕೆ ಹಾಗೂ ಜನರಿಗೆ ಮೋಸ ಮಾಡಿ ಮುನಿರತ್ನ ಹಣಕ್ಕಾಗಿ ಬಿಜೆಪಿ ಪಕ್ಷಕ್ಕೆ ಹೋಗಿದ್ದಾರೆ. ಆದರೆ ಜನ ಧರ್ಮದ ಪರವಾಗಿ ಇದ್ದಾರೆಂಬುದನ್ನು ಕಳೆದ 10 ದಿನದಿಂದ ಪ್ರಚಾರದಲ್ಲಿ ನೋಡುತ್ತಿದ್ದೇನೆ. ಡಿಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷದ ಎಲ್ಲಾ ಮುಖಂಡರು ಒಟ್ಟಾಗಿ ಕುಸುಮಾ ಅವರ ಗೆಲುವಿಗೆ ಪ್ರಯತ್ನಿಸುವುದಾಗಿ ತಿಳಿಸಿದರು.