ಮತ್ತೆ ಬಂದಿದೆ ಯುಗಾದಿ! ಈ ಹಬ್ಬದಿಂದಲೇ ಹಿಂದೂಗಳಿಗೆ ಹೊಸ ವರ್ಷಾರಂಭ. ಹಿಂದೂ ಚಾಂದ್ರಮಾನ ಕ್ಯಾಲೆಂಡರ್‌ನ ಚೈತ್ರ ಮಾಸದ ಮೊದಲ ದಿನವನ್ನು ಯುಗಾದಿ ಎನ್ನುವರು. ಈ ವರ್ಷದ ಯುಗಾದಿಯನ್ನು ಇಂದು ಎಲ್ಲೆಡೆ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ. ಉತ್ತರ ಭಾರತದಲ್ಲಿ ಗುಡಿ ಪಾಡ್ವ ಎಂದು ಆಚರಿಸುತ್ತಾರೆ.
ಆಚರಣೆ ಹೇಗೆ?: ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಇನ್ನಿತರ ದಕ್ಷಿಣ ಭಾರತದ ರಾಜ್ಯಗಳಲ್ಲಿ ಯುಗಾದಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಹಲವೆಡೆ ಉಗಾದಿ ಎಂತಲೂ ಕರೆಯುತ್ತಾರೆ. ವಸಂತ ಕಾಲದ ಆಗಮನವನ್ನು ಸೂಚಿಸುವುದರಿಂದ ದಕ್ಷಿಣ ಭಾರತದ ರಾಜ್ಯಗಳಲ್ಲಿ ವಿಜೃಂಭಣೆ ಇರುತ್ತದೆ. ಯುಗ ಮತ್ತು ಆದಿ ಎನ್ನುವ ಎರಡು ಸಂಸ್ಕೃತ ಪದಗಳಿಂದ ರೂಪುಗೊಂಡ ಯುಗಾದಿ ಹೊಸ ಯುಗದ ಆರಂಭವನ್ನು ಸೂಚಿಸುತ್ತದೆ.
ಪೌರಾಣಿಕ ಹಿನ್ನೆಲೆ: ಈ ದಿನ, ಬ್ರಹ್ಮ ದೇವನು ಬ್ರಹ್ಮಾಂಡದ ಸೃಷ್ಟಿಯನ್ನು ಪ್ರಾರಂಭಿಸಿದನು. ಇಂದಿಗೂ ಆಂಧ್ರ ಪ್ರದೇಶ ರಾಜ್ಯದಲ್ಲಿ ಯುಗಾದಿಯಂದು ಬ್ರಹ್ಮ ದೇವನನ್ನು ಪೂಜಿಸುತ್ತಾರೆ. ಮತ್ತು ಈ ದಿನದಂದು ಭಗವಾನ್ ವಿಷ್ಣುವು ಮತ್ಸ್ಯಾವತಾರದಲ್ಲಿ ಅವತರಿಸಿದ ಎನ್ನುತ್ತಾರೆ. ಇದೇ ಸಮಯವನ್ನು ಯುಗಾದಿ ಎಂದು ಆಚರಿಸಲಾಗುತ್ತದೆ. ಭಾರತದಲ್ಲಿ ವಸಂತ ಋತು ಉತ್ತುಂಗದಲ್ಲಿರುವಾಗ ಮತ್ತು ರೈತರು ಹೊಸ ಬೆಳೆ ಪಡೆದುಕೊಳ್ಳುವ ಸಮಯದಲ್ಲಿ ಯುಗಾದಿಯನ್ನು ಸಂಭ್ರಮಿಸುತ್ತಾರೆ. ಹಬ್ಬದ ಸಮಯದಲ್ಲಿ ವಸಂತ ಋತು ಆರಂಭವಾಗುತ್ತದೆ. ಈ ಕಾರಣದಿಂದಾಗಿ ಹವಾಮಾನವು ತುಂಬಾ ಆಹ್ಲಾದಕರವಾಗಿರುತ್ತದೆ. ಹೊಸ ಬೆಳೆ ಪಡೆಯುವ ರೈತಾಪಿ ವರ್ಗ ಸಂತೋಷ ಅನುಭವಿಸುತ್ತಾರೆ. ಹೀಗಾಗಿ ಯುಗಾದಿಯನ್ನು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗುತ್ತದೆ.
ಯುಗಾದಿ ಜನರಿಗೆ ಅದೃಷ್ಟ, ಸಂಪತ್ತು ಮತ್ತು ಸಮೃದ್ಧಿಯನ್ನು ಹೊತ್ತು ತರುತ್ತದೆ ಎನ್ನುವ ನಂಬಿಕೆಯಿದೆ. ಹೊಸ ಕೆಲಸದ ಆರಂಭಕ್ಕೆ ಇದು ಸುದಿನ. ದಿನದ ಯಾವುದೇ ಸಮಯದಲ್ಲಿಯೂ ಶುಭ ಕಾರ್ಯ ಮಾಡಲು ಉತ್ತಮ ಮಹೂರ್ತವಿರುವ ಅಪರೂಪದ ದಿನವೇ ಯುಗಾದಿ. ಕರ್ನಾಟಕದಲ್ಲಿ ಯುಗಾದಿ ಆಚರಣೆಯ ಅಂಗವಾಗಿ ಜನರು ಮಲ್ಲಿಗೆ ಮಾಲೆ ಮಾಡಿ ದೇವರಿಗೆ ಅರ್ಪಿಸುತ್ತಾರೆ. ತಮ್ಮ ಮನೆಯ ಶಾಂತಿಗಾಗಿ ಮನೆಯ ಮುಖ್ಯ ಬಾಗಿಲಿನಲ್ಲಿ ಕಲಶದ ಮೇಲೆ ತೆಂಗಿನಕಾಯಿ ಇಟ್ಟು ಪೂಜಿಸಿ ಮಾಡಿ, ಬೇವು-ಬೆಲ್ಲ ಸವಿಯುತ್ತಾರೆ.
ಇದು ಚಳಿಗಾಲದ ಕಠೋರವಾದ ಚಳಿಯ ನಂತರ ವಸಂತಕಾಲದ ಆರಂಭ ಮತ್ತು ಸೌಮ್ಯ ಹವಾಮಾನವನ್ನು ಸೂಚಿಸುವ ಹಬ್ಬ. ವಸಂತ ಋತುವನ್ನು ಸ್ವಾಗತಿಸಲು ಆಚರಿಸುವ ಸಂದರ್ಭವೂ ಹೌದು. ಜನರು ತಮ್ಮ ಮನೆಗಳನ್ನು ಸ್ವಚ್ಛಗೊಳಿಸುತ್ತಾರೆ, ಹೊಸ ಬಟ್ಟೆಗಳನ್ನು ಖರೀದಿಸುತ್ತಾರೆ. ಮನೆಯ ಪ್ರವೇಶದ್ವಾರಗಳನ್ನು ಮಾವಿನೆಲೆಗಳಿಂದ ಅಲಂಕರಿಸುತ್ತಾರೆ. ಹಬ್ಬದ ದಿನ ತಮ್ಮ ಮನೆಯ ಸುತ್ತಲಿನ ಸ್ಥಳಗಳನ್ನು ಹಸುವಿನ ಸಗಣಿಯ ನೀರನ್ನು ಸಿಂಪಡಿಸಿ ಸ್ವಚ್ಛಗೊಳಿಸಿದರೆ, ಇನ್ನೂ ಕೆಲವರು ಹಸುವಿನ ಸಗಣಿಯನ್ನು ಹಾಕಿ ಮನೆಯಂಗಳ ಸ್ವಚ್ಛಗೊಳಿಸುವರು. ನಂತರ ಮನೆಯನ್ನು ಹೂವು, ರಂಗೋಲಿಗಳಿಂದ ಅಲಂಕರಿಸುತ್ತಾರೆ.
ದೇವರಿಗೆ ಪೂಜೆ ಸಲ್ಲಿಸಿದ ನಂತರ ಹೊಸ ವರ್ಷವನ್ನು ಆತ್ಮೀಯವಾಗಿ ಸ್ವಾಗತಿಸುತ್ತಾರೆ. ದಕ್ಷಿಣ ಭಾರತದ ಅನೇಕ ಭಾಗಗಳಲ್ಲಿ ಭಕ್ತರು ಎಣ್ಣೆ ಸ್ನಾನದಿಂದ ದಿನ ಪ್ರಾರಂಭಿಸುವುದುಂಟು. ಸಂಬಂಧಿಕರು ಒಟ್ಟಿಗೆ ಸೇರಿ ಈ ದಿನವನ್ನು ಸಂಭ್ರಮಿಸುತ್ತಾರೆ. ಯುಗಾದಿಯನ್ನು ಹಿಂದೂಗಳು ಸೃಷ್ಟಿಯ ಆರಂಭವೆಂದು, ಹೊಸ ವರ್ಷದ ಆರಂಭವೆಂದೂ ಆಚರಿಸುತ್ತಾರೆ. ಯುಗಾದಿ ಆಚರಣೆ ವಿಧಿವಿಧಾನಗಳು ಸ್ಥಳದಿಂದ ಸ್ಥಳಕ್ಕೆ ವಿಭಿನ್ನವಾಗಿದ್ದರೂ ಕೆಲವು ಸ್ಥಳಗಳಲ್ಲಿ ಈ ದಿನ ಎಣ್ಣೆ ಸ್ನಾನ ಮಾಡಿ, ದೇವರನ್ನು ಪೂಜಿಸಿ ನಂತರ ಸಿಹಿ ಊಟ ಮಾಡುವ ಸಂಪ್ರದಾಯವಿದೆ.
ಶೋಭಕೃತ್ ಸಂವತ್ಸರ: ಶೋಭಕೃತ್- ಇದು ಹೊಸ ಸಂವತ್ಸರದ ಹೆಸರು. ಶೋಭತ ಇತಿ ಶೋಭಾ. ಹಾಗೆಂದರೆ ಪ್ರಕಾಶತೆ, ಕಾಂತಿ. ಅಲ್ಲದೇ ಶುಭ ಅಂತಲೂ ಅರ್ಥೈಸಲಾಗುತ್ತದೆ. ಕೃತ್ ಎಂದರೆ ಮಾಡುವುದು. ಒಟ್ಟಾರೆ ಶುಭವನ್ನು ಒಳ್ಳೆಯದನ್ನು ಮಾಡಿಸುವ ಸಂವತ್ಸರ ಎಂದು ಅರ್ಥೈಸಬಹುದು. ಹೊಸ ಸಂವತ್ಸರದಲ್ಲಿ ಎಲ್ಲರೂ ಶುಭ ಕಾರ್ಯ, ಮಂಗಳಕಾರ್ಯಗಳನ್ನು ಮಾಡುವಂತಾಗಲಿ ಎಂಬುದೇ ಆಶಯ.
ಇದನ್ನೂ ಓದಿ: ಮಾದಪ್ಪನ ಬೆಟ್ಟಕ್ಕೆ ಭಕ್ತರ ದಂಡು: ಯುಗಾದಿ ರಥೋತ್ಸವಕ್ಕೆ ಭರದ ಸಿದ್ಧತೆ