ನೆಲಮಂಗಲ: ರಿಯಲ್ ಎಸ್ಟೇಟ್ ಉದ್ಯಮಿಯನ್ನು ಕೊಲೆ ಮಾಡಿದ ಬ್ಯೂಟಿ ಪಾರ್ಲರ್ನ ಬ್ಯೂಟಿಯೊಬ್ಬಳು ನೇರವಾಗಿ ಪೊಲೀಸ್ ಠಾಣೆಗೆ ಆಗಮಿಸಿ ಪೊಲೀಸರಿಗೆ ಶರಣಾಗಿದ್ದಾಳೆ.
ಪಲಾರ್ ಸ್ವಾಮಿ ಅಲಿಯಾಸ್ ಸ್ವಾಮಿ ರಾಜ್ (50) ಕೊಲೆಗೀಡಾದ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ಕೊಲೆಗೈದ ಆರೋಪಿ ಬ್ಯೂಟಿ ಪಾರ್ಲರ್ ಬ್ಯೂಟಿ ನೇತ್ರಾ ನೇರವಾಗಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾಳೆ.
ಕೊಲೆಯಾದ ಪಲಾರ್ ಸ್ವಾಮಿ 25 ವರ್ಷಗಳ ಹಿಂದೆ ಸತ್ಯಕುಮಾರಿ ಜೊತೆ ವಿವಾಹವಾಗಿದ್ದರು. ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಈತ ಬೆಂಗಳೂರು ಉತ್ತರ ತಾಲೂಕಿನಲ್ಲಿ ಲೇಔಟ್ ನಿರ್ಮಾಣ ಮಾಡಿ ನೂರಾರು ಕೋಟಿ ಸಂಪಾದನೆ ಮಾಡಿದ್ದರು.

ಈ ವೇಳೆ 6 ವರ್ಷಗಳ ಹಿಂದೆ ಬ್ಯೂಟಿ ಪಾರ್ಲರ್ನಲ್ಲಿ ಕೆಲಸ ಮಾಡುತ್ತಿದ್ದ ನೇತ್ರಾ ಎಂಬಾಕೆಯ ಪರಿಚಯವಾಗಿತ್ತು. ಬ್ಯೂಟಿಶಿಯನ್ ಸೌಂದರ್ಯಕ್ಕೆ ಮನಸೋತ ಪಲಾರ್ ಸ್ವಾಮಿ, ಆಕೆಯೊಂದಿಗೆ ಎರಡನೇ ಮದುವೆಯಾಗಿದ್ದರು. ಅಲ್ಲದೆ ಹಾರೋಕ್ಯಾತನಹಳ್ಳಿ 6 ಕೋಟಿ ಖರ್ಚು ಮಾಡಿ ಭವ್ಯವಾದ ಬಂಗಲೆ ಕಟ್ಟಿ ವಾಸಿಸುತ್ತಿದ್ದರು.
ಪಲಾರ್ ಸ್ವಾಮಿ ಎರಡನೇ ಮದುವೆಯಾದರೂ ಮೊದಲನೇ ಹೆಂಡತಿಯ ಮಕ್ಕಳ ಮೇಲೆ ಪ್ರೀತಿ ಹೊಂದಿದ್ದರು. ಹಾಗಾಗಿ ಮಕ್ಕಳಿಗೆ ಹಣ ಸಹಾಯ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ಮೊದಲನೇ ಹೆಂಡತಿಯ ಮಗಳಿಗೆ ಸ್ಕೂಟರ್ ಕೊಡಿಸಿದ್ದರಂತೆ. ಇದರಿಂದ ಕೋಪಗೊಂಡ ನೇತ್ರಾ ಪತಿಯನ್ನು ಕೊಲೆ ಮಾಡಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ.

ತನ್ನ ಗಂಡ ಲೈಂಗಿಕ ಕಿರುಕುಳ ನೀಡುತ್ತಿದ್ದ. ಪರ ಪುರುಷರೊಂದಿಗೆ ಮಲಗುವಂತೆ ಬಲವಂತ ಮಾಡುತ್ತಿದ್ದ. ಇದರಿಂದ ತಾನೇ ಕಬ್ಬಿಣದ ರಾಡ್ನಿಂದ ಕೊಲೆ ಮಾಡಿರುವುದಾಗಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ಬಂದು ಶರಣಾದ ಆರೋಪಿ ನೇತ್ರಾ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ.
ಇದನ್ನೂ ಓದಿ: ಇಂದು ಸಂಪುಟ ಸಭೆ: ಕಿತ್ತೂರು ಕರ್ನಾಟಕ ನಾಮಕರಣ, ನೂತನ ಮರಳು ನೀತಿ ಚರ್ಚೆ ಸಾಧ್ಯತೆ