ಬೆಂಗಳೂರು: ಕೊರೊನಾ ಸೋಂಕು ಸಂಪೂರ್ಣವಾಗಿ ತೊಲಗಲಿ, ಜನ ಸುರಕ್ಷಿತವಾಗಿರಲಿ ಎಂದು ಕೇಂದ್ರ ಸರ್ಕಾರ ಲಾಕ್ಡೌನ್ ಅವಧಿಯನ್ನ ಮೇ 3 ರ ವರೆಗೆ ವಿಸ್ತಿರಿಸಿದೆ. ಆದ್ರೆ ಇದರ ಜೊತೆಗೆ ಕೂಲಿ ಕಾರ್ಮಿಕರ ಹಸಿವು ನೀಗಿಸೋದು ಯಾರು? ಎಂಬ ಪ್ರಶ್ನೆ ಇದೀಗ ಮತ್ತೆ ಉದ್ಭವಿಸಿದೆ.
ಕಳೆದ ಇಪ್ಪತ್ತೊಂದು ದಿನದ ಲಾಕ್ಡೌನ್ನಲ್ಲಿ ಸಾಕಷ್ಟು ಸಂಘ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು (ಎನ್ ಜಿ ಒ) ದಾನಿಗಳು ಮುಂದೆ ಬಂದು ಆಹಾರದ ಪೊಟ್ಟಣ, ಆಹಾರ ಸಾಮಗ್ರಿಗಳ ಕಿಟ್ ಒದಗಿಸಿದ್ದರು. ಆದ್ರೆ ಲಾಕ್ಡೌನ್ ಮುಂದುವರೆದಿರುವುದರಿಂದ ಎಷ್ಟು ಸಂಸ್ಥೆಗಳು ತಮ್ಮ ಸೇವೆ ಮುಂದುವರಿಸಲಿವೆ ಎಂಬ ಪ್ರಶ್ನೆ ಇದೀಗ ಮರು ಜನ್ಮಪಡೆದಿದೆ.
ಸರ್ಕಾರ ಪಡಿತರ ವಿತರಿಸುತ್ತಿದೆಯಾದರೂ, ಉತ್ತರ ಭಾಗದಿಂದ ಬಂದಿರುವ ಕಾರ್ಮಿಕರು, ಉತ್ತರ ಕರ್ನಾಟಕದ ಜನರು ಪಡಿತರ ಚೀಟಿ ಇಲ್ಲದೇ, ಕೈಗೆ ಕೆಲಸವೂ ಇಲ್ಲದೇ ನಗರದ ಹೊರವಲಯಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಜನಪ್ರತಿನಿಧಿಗಳೇ ವಿಶೇಷ ಅನುದಾನಗಳ ಮೂಲಕ ಬಡವರ ಮೂರು ಹೊತ್ತಿನ ಊಟ ನೋಡಿಕೊಳ್ಳಬೇಕಿದೆ.
ಪ್ರತಿದಿನ 1,400 ಬಡಜನರಿಗೆ ಒಂದು ಹೊತ್ತಿನ ಊಟ ನೀಡುತ್ತಾ ಬಂದಿರುವ, ಕರ್ನಾಟಕ ರಕ್ಷಣಾ ವೇದಿಕೆಯ ಮಲ್ಲೇಶ್ವರಂ ಕ್ಷೇತ್ರದ ಅಧ್ಯಕ್ಷ ಜಿ.ಎಸ್ ಚೌಧರಿ ಮಾತನಾಡಿ, ಇಂದಿರಾ ಕ್ಯಾಂಟೀನ್ ಆಹಾರವೂ ಎಲ್ಲ ಕಡೆ ಸಿಗುತ್ತಿಲ್ಲ, ರೇಷನ್ ಕೂಡಾ ಕೂಲಿ ಕಾರ್ಮಿಕರಿಗೆ ಲಭ್ಯವಾಗೋದಿಲ್ಲ, ಎಷ್ಟೋ ಕಡೆ ಕಾರ್ಪೋರೇಟರ್ಗಳು ಕೂಡಾ ಸಹಾಯಕ್ಕೆ ಮುಂದಾಗುತ್ತಿಲ್ಲ ಎಂದಿದ್ದಾರೆ.
ತಮ್ಮ ತಂಡದ ಹದಿನೈದು ಜನ ಅಡುಗೆ ತಯಾರಿಸಿ ಕಳೆದ ಇಪ್ಪತ್ತೊಂದು ದಿನದಿಂದಲೂ ಅಬ್ಬಿಗೆರೆಯ 600 ಜನಕ್ಕೆ, ಪೀಣ್ಯಾ ಇಂಡಸ್ಟ್ರಿಯಲ್ ಏರಿಯಾದಲ್ಲಿ 160 ಜನರಿಗೆ, ನೆಲಗೆದ್ದನಹಳ್ಳಿಯ 500 ಜನ, ಸುವರ್ಣ ನಗರ, ಶಿವಪುರಂಗಳಲ್ಲಿ ಆಹಾರ ಹಂಚುತ್ತಿದ್ದೇವೆ. ಇಷ್ಟು ಕೊಟ್ಟರೂ ಅನೇಕರಿಗೆ ಇನ್ನೂ ಊಟ ಸಾಲುತ್ತಿಲ್ಲ. ಪ್ರತಿದಿನ ಹೆಚ್ಚು ಅಡುಗೆ ತಯಾರಿಸುತ್ತಲೇ ಇದೇವೆ. ಸಹಾಯವಾಣಿಯಿಂದ ಬಂದ ಕರೆಗೆ ಸ್ಪಂದಿಸಿ ಆಹಾರ ಹಂಚುತ್ತಿದ್ದೇವೆ ಎಂದರು.
ಈಗಾಗಲೇ ಊಟ, ರೇಷನ್ ಕಿಟ್ ನೀಡುತ್ತಿದ್ದ ನಮ್ಮ ಬೆಂಗಳೂರು ಫೌಂಡೇಶನ್, ತಯಾರಿಸಿದ ಆಹಾರ ಕೊಡುವುದು ಕಡಿಮೆ ಆಗ್ಬಹುದು. ಆದ್ರೆ ಸ್ಲಂ ಗಳಲ್ಲಿ ಆಹಾರ ಸಾಮಗ್ರಿಗಳ ಕಿಟ್ ವಿತರಿಸುವುದು ಮುಂದುವರಿಯುತ್ತದೆ ಎಂದು ಸಂಸ್ಥೆಯ ಹರೀಶ್ ತಿಳಿಸಿದ್ದಾರೆ.
ಇನ್ನು ಇಸ್ಕಾನ್ ಸಂಸ್ಥೆಯೂ 21 ದಿನಕ್ಕೆ ಬೇಕಾಗುವಷ್ಟು ಮಾತ್ರ ಆಹಾರ ಸಾಮಗ್ರಿಯ 40 ಸಾವಿರ ಕಿಟ್ ವಿತರಿಸಿತ್ತು. ಅದೇ ರೀತಿ ಏಪ್ರಿಯಾ ಫೌಂಡೇಶನ್ ಕೂಡಾ ತಮ್ಮ ಸೇವೆ ಮುಂದುವರಿಸಲಿದೆಯಾ ಎಂಬ ಪ್ರಶ್ನೆ ಕಾಡಿದೆ. ಒಟ್ಟಿನಲ್ಲಿ ಬಿಬಿಎಂಪಿ, ರಾಜ್ಯ ಸರ್ಕಾರ ಮುಂದುವರಿದ ಲಾಕ್ ಡೌನ್ ಅವಧಿಯಲ್ಲಿ ಬಡಜನ, ಕೂಲಿಕಾರ್ಮಿಕರ ಆಹಾರಕ್ಕೆ ಯಾವ ವ್ಯವಸ್ಥೆ ಮಾಡಲಿದೆ ಎಂದು ಕಾದು ನೋಡಬೇಕಿದೆ.