ETV Bharat / state

'ನಾವು ಜಾತಿ, ಧರ್ಮದ ರಾಜಕಾರಣ ಮಾಡಲ್ಲ, ಪ್ರಣಾಳಿಕೆ ಅಕ್ಷರಶಃ ಜಾರಿ ಮಾಡುತ್ತೇವೆ' - ಈಟಿವಿ ಭಾರತ ಕನ್ನಡ

ರಾಜ್ಯದ ಅಭಿವೃದ್ಧಿ, ಮುಂದಿನ ಪೀಳಿಗೆ, ಮಕ್ಕಳ ಭವಿಷ್ಯಕ್ಕಾಗಿ ಪ್ರಧಾನಿ ಮೋದಿ ಅವರ ಕೈ ಬಲಪಡಿಸುವ ಅಗತ್ಯವಿದೆ ಎಂದು ಬಿಎಸ್​ವೈ ಹೇಳಿದರು.

ಬಿ ಎಸ್​ ಯಡಿಯೂರಪ್ಪ
ಬಿ ಎಸ್​ ಯಡಿಯೂರಪ್ಪ
author img

By

Published : May 8, 2023, 2:14 PM IST

ಬೆಂಗಳೂರು: ಮೊದಲ ಬಾರಿ ಅಧಿಕಾರಕ್ಕೆ ಬಂದಾಗ ಮತ್ತು ಈ ಬಾರಿಯೂ ನಾವು ಜಾತಿ ರಾಜಕಾರಣ ಮಾಡಿಲ್ಲ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಒಂದೇ ಎಂದು ಆಡಳಿತ ನೀಡಿದ್ದೇವೆ. ರಾಜ್ಯದ ಅಭಿವೃದ್ಧಿಗೆ ಬದ್ದರಿದ್ದೇವೆ. ಪ್ರಣಾಳಿಕೆಯನ್ನು ಅಕ್ಷರಶಃ ಜಾರಿಗೆ ತರುತ್ತೇವೆ. ಮೇ 10 ರ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿ, ನಮಗೆ ಕೆಲಸ ಮಾಡಲು ಅವಕಾಶ ನೀಡಿ ಎಂದು ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.

ನಗರದ ಖಾಸಗಿ ಹೋಟೆಲ್​ನಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಅಗತ್ಯವಿದೆ. ಮೋದಿಯಂತಹ ಮುತ್ಸದ್ದಿ ಪ್ರಧಾನಿ ದೇಶದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಒಂದು ದಿನವೂ ವಿಶ್ರಾಂತಿ ಪಡೆಯದೇ ಓಡಾಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಮೋದಿ, ಶಾ, ನಡ್ಡಾ ವಿಶೇಷ ಪ್ರಯತ್ನ ಮಾಡುತ್ತಿದ್ದಾರೆ.

ಎಲ್ಲ ಯೋಜನೆಗಳನ್ನು ಕಾರ್ಯರೂಪ ಮಾಡುವ ಪ್ರಧಾನಿ ಸಿಕ್ಕಿದ್ದಾರೆ. ಜಾತಿ ಧರ್ಮ ಮೀರಿ ಬಸವೇಶ್ವರರ ತತ್ವದಂತೆ ಆಡಳಿತ ನಡೆಸುತ್ತಿದ್ದಾರೆ. ಅವರ ಹೆಜ್ಜೆಗೆ ಹೆಜ್ಜೆ ಹಾಕುವ ಸರ್ಕಾರ ಕರ್ನಾಟಕದಲ್ಲಿ ಬೇಕಾಗಿದೆ. ರಾಜ್ಯದ ಅಭಿವೃದ್ಧಿ, ಮುಂದಿನ ಪೀಳಿಗೆ, ಮಕ್ಕಳ ಭವಿಷ್ಯಕ್ಕಾಗಿ ಮೋದಿ ಕೈ ಬಲಪಡಿಸುವ ಅಗತ್ಯವೂ ಇದೆ, ಕರ್ನಾಟಕದಲ್ಲಿ ಅತಿ ವೇಗದಲ್ಲಿ ರಸ್ತೆ, ರೈಲು, ಬಂದರು, ವಿಮಾನ ನಿಲ್ದಾಣ ಅಭಿವೃದ್ಧಿ ಆಗುತ್ತಿವೆ, ಮನೆ ಮನೆಗೆ ಶುದ್ಧ ಕುಡಿಯುವ ನೀರು ಪೂರೈಕೆ, ಶೌಚಾಲಯಗಳ ನಿರ್ಮಾಣ, ಮಕ್ಕಳ ಶಿಕ್ಷಣ ಅವರ ಬದುಕಿಗೆ ಆದ್ತೆಯ ನೀಡುವ ನಾಯಕ ಮೋದಿ ಎಂದರು.

ಕೊರೊನಾ ಮಹಾಮಾರಿ ಬಂದಾಗ ನಮ್ಮ ಜೊತೆ ನಿಂತು ಪರಿಹಾರ ನೀಡಿದ್ದಾರೆ. ನಮ್ಮ ಆರೋಗ್ಯ ರಕ್ಷಣೆ ಮಾಡಿದ್ದಾರೆ, ಮೋದಿ ಸರ್ಕಾರ ಬಂದ ನಂತರ ದೇಶ ಆರ್ಥಿಕ ಪ್ರಗತಿ ಹೊಂದಿದೆ. ಜಗತ್ತಿನಲ್ಲಿ ಆರ್ಥಿಕ ಸದೃಢತೆಯಲ್ಲಿ ಐದನೇ ಸ್ಥಾನಕ್ಕೆ ಬಂದಿದೆ. ಮುಂದಿನ 25 ವರ್ಷದಲ್ಲಿ ಒಂದು ಅಥವಾ ಎತಡನೇ ಸ್ಥಾನಕ್ಕೆ ಬಂದು ನಿಲ್ಲಲಿದೆ. ಮೋದಿ, ಅಮಿತ್ ಶಾ, ನಡ್ಡಾ ಕರ್ನಾಟಕದ ಬೆಂಬಲ ಕೇಳಲು ರಾಜ್ಯದ ಉದ್ದಗಲಕ್ಕೆ ಓಡಾಡಿದ್ದಾರೆ. ಜನರೊಂದಿಗೆ ಬೆರೆತು ರಾಜ್ಯದ ನಾಡಿಮಿಡಿತ ಅರಿತಿದ್ದಾರೆ. 130-135 ಸ್ಥಾನ ನಿಶ್ಚಿತ, ಸೂರ್ಯ ಚಂದ್ರ ಇರುವಷ್ಟೇ ಸತ್ಯ ನಮ್ಮ ಸರ್ಕಾರ ಬರಲಿದೆ. 110 ಒಮ್ಮೆ 105 ಒಮ್ಮೆ ಬಂದಿತ್ತು, ಈ ಬಾರಿ ಸ್ವಂತ ಬಲದಲ್ಲಿ ಸರ್ಕಾರ ರಚನೆ ನಿಶ್ಚಿತ ಎಂದು ಹೇಳಿದರು.

ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚು ಮಾಡಿ ಇತಿಹಾಸ ಸೃಷ್ಟಿ ಮಾಡಿದ್ದೇವೆ. ಆ ಸಮುದಾಯದ ಹಿತ ಕಾಪಾಡಿದ ತೃಪ್ತಿ ಇದೆ. ಸಮುದಾಯ ಶೇ.90 ರಷ್ಟು ಬಿಜೆಪಿಗೆ ಬೆಂಬಲ ಕೊಡುವುದರಲ್ಲಿ ಅನುಮಾನವಿಲ್ಲ. ಭಾಗ್ಯಲಕ್ಷ್ಮಿ, ಪ್ರತ್ಯೇಕ ಕೃಷಿ ಬಜೆಟ್, ಕೃಷಿಗೆ ಉಚಿತ ವಿದ್ಯುತ್ ಸೇರಿ ಹಲವು ಕಾರ್ಯಕ್ರಮ ನಾನು ತಂದಿದ್ದೆ, ಈಗ ನಮ್ಮ ಸರ್ಕಾರ ರೈತ ವಿದ್ಯಾನಿಧಿ ತಂದಿದೆ, ಮೊದಲ ಬಾರಿ ಅಧಿಕಾರಕ್ಕೆ ಬಂದಾಗ ಮತ್ತು ಈ ಬಾರಿ ನಾವು ಜಾತಿ ರಾಜಕಾರಣ ಮಾಡಿಲ್ಲ, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲ ಒಂದೇ ಎಂದು ಆಡಳಿತ ನೀಡಿದ್ದೇವೆ, ಲಿಂಗಾಯತ ಒಕ್ಕಲಿಗ ಸಮುದಾಯದ ಹಿತದೃಷ್ಟಿಯಿಂದ ಮೀಸಲಾತಿ ಹೊಸ ಪ್ರವರ್ಗ ರಚಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಮುಳುಗುತ್ತಿರುವ ಹಡಗು. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶದಲ್ಲಿ ಓಡಾಡಿದರೂ ನಾಲ್ಕೈದು ಸೀಟು ಬರಲಿಲ್ಲ. ಅವರಲ್ಲಿ ನಾಯಕರ ಯಾರು ಎಂದೇ ಗೊತ್ತಿಲ್ಲ, ಮೋದಿಗೆ ರಾಹುಲ್ ಸರಿಸಮ ಅಲ್ಲ, ಮೋದಿ ಪಿಎಂ ಆದ ನಂತರ ಭ್ರಷ್ಟಾಚಾರದ ಆರೋಪ ಇಲ್ಲದೆ ದೇಶದ ಅಭಿವೃದ್ಧಿಗೆ ದುಡಿಯುತ್ತಿರುವ ನಾಯಕ ಮೋದಿ ಎಂದು ಕೊಂಡಾಡಿದರು.

ಈಗ ನಾವು ಸರ್ಕಾರ ರಚಿಸಿದ ತಕ್ಷಣ ಹಾಲಿನ ಪ್ರೋತ್ಸಾಹ ಧನ 5 ರಿಂದ 7 ರೂ.ಗೆ ಹೆಚ್ಚಿಸಲಿದ್ದೇವೆ, ಸಿರಿಧಾನ್ಯ ಬೆಳೆಗಾರರಿಗೆ 10 ಸಾವಿರ ಪ್ರತಿ ಹೆಕ್ಟೇರ್​ಗೆ ಕೊಡಲಿದ್ದೇವೆ, ಅಡಿಕೆ ಸಂಶೋಧನೆ ಸೇರಿ ಅಡಿಕೆ ಮಂಡಳಿ ಮಾಡಲಿದ್ದೇವೆ, ಅಕ್ಷರಶಃ ನಮ್ಮ ಪ್ರಣಾಳಿಕೆ ಜಾರಿ ಮಾಡಲಿದ್ದೇವೆ ಎಂದು ಭರವಸೆ ನೀಡಿದರು.

ವೀರಶೈವ ಲಿಂಗಾಯತ ಸಮಾಜ ಎತ್ತಿಕಟ್ಟುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಅಧಿಕಾರ ಇದ್ದಾಗ ಲಿಂಗಾಯತ ನೆನಪಾಗಲಿಲ್ಲ, ಈಗ ಚುನಾವಣೆ ವೇಳೆ ನೆನಪಾಗಿದೆ, ಈಗ ಎತ್ತಿಕಟ್ಟುವ ಕೆಲಸ ಮಾಡುತ್ತಿದೆ, ಸಮಾಜ ವಿಭಜಿಸಲು ಮುಂದಾದವರು ಈಗ ಲಿಂಗಾಯತ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಆ ಸಮುದಾಯ ಬಿಜೆಪಿ ಜೊತೆ ಗಟ್ಟಿಯಾಗಿದೆ. ಮೇ.10 ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ಇದನ್ನೂ ಓದಿ: ರಾಜ್ಯದಲ್ಲಿ ಬಿಜೆಪಿ ಪರ ಸ್ಪಷ್ಟ ಅಲೆ ಇದೆ: ಎ.ನಾರಾಯಣಸ್ವಾಮಿ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.