ಬೆಂಗಳೂರು: ಕಟ್ಟಡ ನಿರ್ಮಾಣ, ಬಡಾವಣೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ ಅನುಮೋದನೆ ಪಡೆಯುವ ಹೊಸ ಯೋಜನೆಯನ್ನು ಶೀಘ್ರವೇ ಜಾರಿಗೆ ತರಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದಕ್ಕೆ ಪ್ರತ್ಯೇಕವಾದ ಸಾಫ್ಟ್ವೇರ್ ಅಭಿವೃದ್ಧಿ ಪಡಿಸಿದ್ದು, ಅರ್ಜಿದಾರರು ಆನ್ಲೈನ್ನಲ್ಲೇ ಅರ್ಜಿ ಸಲ್ಲಿಸಬೇಕು. ಅರ್ಜಿ ಸರಿಯಿರದಿದ್ದರೆ ಸ್ವೀಕೃತಿ ಹಂತದಲ್ಲೇ ತಿರಸ್ಕೃತವಾಗುತ್ತದೆ. ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸುಮಾರು 14 ವಿವಿಧ ಎನ್ಒಸಿ ಪಡೆಯಲು ಅಲೆದಾಡುವ, ವಿಳಂಬ ಮಾಡುವ ಮಧ್ಯವರ್ತಿಗಳ ಕಿರುಕುಳ ಇರುವುದಿಲ್ಲ. ಒಂದು ತಿಂಗಳೊಳಗಾಗಿ ಪರವಾನಗಿ ಅರ್ಜಿದಾರರಿಗೆ ಸಿಗಲಿದೆ. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ ದಿನವೇ ಮಾಹಿತಿ ಆನ್ಲೈನ್ನಲ್ಲೇ ರವಾನಿಸಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.
ಅನುಮತಿ ಕಡ್ಡಾಯ :
ಮೊಬೈಲ್ ಸೇರಿದಂತೆ ಯಾವುದೇ ರೀತಿಯ ಟವರ್ ಅಳವಡಿಕೆಗೆ ಅನುಮತಿ ಪಡೆಯುವುದು ಕಡ್ಡಾಯ ಮಾಡಲಾಗುವುದು. ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದುಕೊಳ್ಳುವುದರ ಜೊತೆಗೆ ಟವರ್ ಅಳವಡಿಸಲು ಅನುಮತಿ ಪಡೆಯಬೇಕು. ಅದಕ್ಕೂ ಶುಲ್ಕ ವಿಧಿಸಲಾಗುವುದು. ಟವರ್ ಅಳವಡಿಸಬೇಕಾದರೆ ಕೆಲವು ಸೂಚನೆಗಳನ್ನು ನೀಡಲಾಗಿದೆ. ಶಾಲೆ, ಆಸ್ಪತ್ರೆಗಳಿಂದ ನಿರ್ದಿಷ್ಟ ದೂರದಲ್ಲಿರಬೇಕು. ಟವರ್ನಿಂದ ಉಂಟಾಗುವ ರೇಡಿಯೇಷನ್ ಪರಿಗಣಿಸಿ ಟವರ್ಗೆ ಅನುಮತಿ ನೀಡಲಾಗುತ್ತದೆ ಎಂದು ತಿಳಿಸಿದರು.
ಪಿಜಿಗೆ ಪ್ರತ್ಯೇಕ ಕಾನೂನು :
ರಾಜ್ಯದಲ್ಲಿ ಪಿಜಿಗಳ (ಪೇಯಿಂಗ್ ಗೆಸ್ಟ್) ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತ್ಯೇಕ ಕಾನೂನು ಜಾರಿಗೆ ತರುವ ಬಗ್ಗೆ ಆಲೋಚಿಸಲಾಗುತ್ತಿದೆ. ಪಿಜಿ ನಿವಾಸಿಗಳಿಗೆ ಭದ್ರತೆ ಹಾಗೂ ವಂಚನೆಯಾಗದಂತೆ ತಡೆಯುವ ಉದ್ದೇಶದಿಂದ ಕಾನೂನು ತರಲಾಗುವುದು. ಇನ್ನು ಪಿಜಿಗಳ ಆರಂಭ ಕಡ್ಡಾಯವಾಗಿ ಪರವಾನಗಿ ಪಡೆಯಬೇಕು ಎಂದರು.
ಸರ್ಕಾರಕ್ಕೆ ಯಾವುದೇ ಗೊಂದಲವಿಲ್ಲ :
ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಸುಭದ್ರವಾಗಿದೆ. ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಡಾ.ಜಿ. ಪರಮೇಶ್ವರ್ ಅವರು ಸರ್ಕಾರವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಆದರೆ ಪ್ರತಿಪಕ್ಷದವರು ಈ ಗೊಂದಲವನ್ನು ಸೃಷ್ಟಿಸುತ್ತಿದ್ದಾರೆ. ಸರ್ಕಾರದಲ್ಲಿ ಅಭದ್ರತೆ ವಿಚಾರವಿಲ್ಲ. ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷಗಳ ಹಿರಿಯ ನಾಯಕರು ಇಂದು ಸಭೆ ನಡೆಸಿದ್ದಾರೆ. ಒಂದು ವೇಳೆ ಅಲ್ಲಿ ಸಂಪುಟ ಪುನಾರಚನೆಯಾಗಬೇಕೆಂದು ನಿರ್ಧಾರ ತೆಗೆದುಕೊಂಡರೆ ಅದಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದರು.