ಮಹದೇವಪುರ(ಬೆಂಗಳೂರು): ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ಬೆಂಗಳೂರು ಸಂಪೂರ್ಣ ನದಿಯಂತಾಗಿದೆ. ಸೋಮವಾರ ರಾತ್ರಿ ಸುರಿದ ಮಳೆಗೆ ಮಹದೇವಪುರ ಕ್ಷೇತ್ರದ ಸರ್ಜಾಪುರ ರಸ್ತೆಯ ದೊಡ್ಡಕನ್ನಹಳ್ಳಿಯ ರೈನ್ ಬೋ ಲೇಔಟ್ ಹಾಗೂ ಕಂಟ್ರಿ ಸೈ್ಡ್ ಸೇರಿದಂತೆ ಹಲವು ಲೇಔಟ್ಗಳು ಮುಳುಗಡೆಯಾಗಿದ್ದು, ಬಹುತೇಕ ಎಲ್ಲಾ ನಿವಾಸಿಗಳು ಮನೆ ಖಾಲಿ ಮಾಡಿಕೊಂಡು ಬೇರೆ ಕಡೆ ತೆರಳಿದ್ದಾರೆ.
ಸರ್ಜಾಪುರ ರಸ್ತೆಯ ಎರಡು ಲೇಔಟ್ಗಳು ಸಂಪೂರ್ಣ ಮಳೆ ನೀರಿನಿಂದ ತುಂಬಿವೆ. ರೈನ್ ಬೋ ಲೇಔಟ್ನಲ್ಲಿ ಸುಮಾರು 350ಕ್ಕೂ ಹೆಚ್ಚು ಮನೆಗಳಿದ್ದು ಎಲ್ಲಾರೂ ಖಾಲಿ ಮಾಡಿದ್ದಾರೆ. ಎರಡು-ಮೂರು ಅಂತಸ್ತುಗಳ ಮೇಲೆ ವಾಸವಾಗಿರುವ 10 ರಿಂದ 12 ಮನೆಗಳಲ್ಲಿ ಮಾತ್ರ ನಿವಾಸಿಗಳು ಉಳಿದುಕೊಂಡಿದ್ದಾರೆ. ಕಂಟ್ರಿ ಸೈಡ್ ಲೇಔಟ್ನಲ್ಲಿ 35ಕ್ಕೂ ಹೆಚ್ಚು ಮನೆಗಳಿದ್ದು, ಇಲ್ಲಿನ ನಿವಾಸಿಗಳು ಸಂಪೂರ್ಣವಾಗಿ ಮನೆ ಖಾಲಿ ಮಾಡಿ ಲಾಡ್ಜ್ ಮತ್ತು ಹೋಟೆಲ್ಗಳಲ್ಲಿ ತಂಗಿದ್ದಾರೆ. ಮೂರ್ನಾಲ್ಕು ಅಡಿ ನೀರು ತುಂಬಿರುವ ಕಾರಣ ಲಕ್ಷಾಂತರ ರೂಪಾಯಿ ಮೌಲ್ಯದ ಪೀಠೋಪಕರಣಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳು ನೀರಿನಲ್ಲಿ ಮುಳುಗಿವೆ.
ಕೆರೆಗಳು ತುಂಬಿ ಕೋಡಿ ಬಿದ್ದಿದ್ದು, ನೀರು ರಸ್ತೆಗಳಿಗೆ ಹರಿಯುತ್ತಿದೆ. ಸರ್ಜಾಪುರ ರಸ್ತೆಯ ದೊಡ್ಡಕನ್ನಹಳ್ಳಿ ಬಳಿ ನಾಲ್ಕೈದು ಕಿ. ಮೀ ರಸ್ತೆ ಜಲಾವೃತಗೊಂಡಿದೆ. ವಾಹನ ಸವಾರರು ಟ್ರಾಫಿಕ್ ಜಾಮ್ ಸಮಸ್ಯೆಯಿಂದ ಪರದಾಡುತ್ತಿದ್ದಾರೆ. ಇನ್ನು, ಮನೆಗಳಿಗೆ ನೀರು ನುಗಿದ್ದು, ನಿವಾಸಿಗಳು ಅನ್ನ- ನೀರಿಗೂ ಪರದಾಟ ನಡೆಸುತ್ತಿದ್ದಾರೆ. ಕುಡಿಯಲು, ಬಳಕೆಗೆ ಶುದ್ಧ ನೀರಿಲ್ಲದೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ವಿಪ್ರೊ ಕಂಪನಿಯ ಒಳಗೆ ನುಗ್ಗಿದ ನೀರು: ಐಟಿಬಿಟಿ ಕ್ಷೇತ್ರವಾದ ಮಹದೇವಪುರ ಸಂಪೂರ್ಣ ಮುಳುಗಿದ್ದು, ಸರ್ಜಾಪುರದಲ್ಲಿರುವ ವಿಪ್ರೊ ಕಂಪನಿಯ ಒಳಗೆ ನೀರು ನುಗ್ಗಿದೆ. ಹಲವು ಕಂಪನಿಗಳು ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ನೀಡಿವೆ.
ಇದನ್ನೂ ಓದಿ: ಬೆಂಗಳೂರು ಬಡಾವಣೆಗಳ ಮುಳುಗಡೆಗೆ ಕಾಂಗ್ರೆಸ್ ಯೋಜನಾ ರಹಿತ ಆಡಳಿತ ಕಾರಣ: ಸಿಎಂ ಆರೋಪ