ಬಾಗಲಕೋಟೆ: ಜಿಲ್ಲೆಯ ತುಳಸಿಗೇರಿ ಗ್ರಾಮದ ಸೈಕ್ಲಿಂಗ್ ಕ್ರೀಡಾಪಟು ಏಷ್ಯನ್ ಕ್ರೀಡಾಕೂಟದಲ್ಲಿ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾನೆ.
ನವದೆಹಲಿಯಲ್ಲಿ ಇಂದು ನಡೆದ ಏಷ್ಯನ್ ಕಪ್ ಸೈಕ್ಲಿಂಗ್ ಕ್ರೀಡಾಕೂಟದ ಜೂನಿಯರ್ ವಿಭಾಗದಲ್ಲಿ 3 ಕಿ.ಮೀ. ವೈಯಕ್ತಿಕ ಶೂಟ್ನಲ್ಲಿ ತುಳಸಿಗೇರಿ ಗ್ರಾಮದ ವೆಂಕಪ್ಪ ಕೆಂಗಲಗುತ್ತಿ ಬಂಗಾರವನ್ನು ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೇ, ನಿನ್ನೆ ನಡೆದ 10 ಕಿಲೋಮೀಟರ್ ಸ್ಕ್ರ್ಯಾಚ್ ರೇಸ್ನಲ್ಲಿ ಬೆಳ್ಳಿ ಪದಕವನ್ನು ಪಡೆದು ರಾಜ್ಯಕ್ಕೆ ಕೀರ್ತಿಯನ್ನು ತಂದಿರುತ್ತಾರೆ.
ವೆಂಕಪ್ಪ ಕೆಂಗಲಗುತ್ತಿ ಬಾಗಲಕೋಟ್ ಕ್ರೀಡಾ ವಸತಿ ನಿಲಯದ ಸೈಕ್ಲಿಂಗ್ ತರಬೇತುದಾರರಾದ ಶ್ರೀಮತಿ ಅನಿತಾ ಎಂ. ನಿಂಬರ್ಗಿಯವರಿಂದ ತರಬೇತಿಯನ್ನು ಪಡೆದಿದ್ದಾರೆ. ಕಳೆದ ಮೂರು ವರ್ಷಗಳಿಂದ ರಾಷ್ಟ್ರೀಯ ಸೈಕ್ಲಿಂಗ್ ಅಕಾಡೆಮಿ ನವದೆಹಲಿಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಇವರಿಗೆ ಬಾಗಲಕೋಟೆ ಜಿಲ್ಲಾಡಳಿತ ಹಾಗೂ ಯುವ ಸಬಲೀಕರಣ ಕ್ರೀಡಾ ಇಲಾಖೆ ಅಭಿನಂದನೆಗಳನ್ನು ತಿಳಿಸಿದೆ.
ತುಳಸಿಗೇರಿ ಗ್ರಾಮವು ಸೈಕ್ಲಿಂಗ್ ಕ್ರೀಡಾಪಟುಗಳ ತಾಣವಾಗಿದ್ದು, ವೆಂಕಪ್ಪ ಕೆಂಗಲಗುತ್ತಿಯ ಈ ಸಾಧನೆಯಿಂದ ಮತ್ತೊಂದು ಗರಿ ದೊರಕಿದಂತಾಗಿದೆ.